ಕೆಜಿಎಫ್: ಪ್ರಾಮಾಣಿಕವಾಗಿ ತನ್ನ ಕರ್ತವ್ಯ ನಿರ್ವಹಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕನನ್ನು ಅಶ್ಲೀಲವಾಗಿ ಬೈದಿದ್ದು ಅಲ್ಲದೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಬಂಗಾರಪೇಟೆಯ ಸರ್ಕಾರಿ ಕಿರಿಯ ಕಾಲೇಜಿನ ಹಂಗಾಮಿ ಪ್ರಾಂಶುಪಾಲ ಮತ್ತು ಕೆಎಸ್ಆರ್ಟಿಸಿ ಚಾಲಕನೊಬ್ಬನ ವಿರುದ್ಧ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.
ಬಂಗಾರಪೇಟೆಯ ಸರ್ಕಾರಿ ಕಿರಿಯ ಕಾಲೇಜಿನ ಹಂಗಾಮಿ ಪ್ರಾಂಶುಪಾಲ ನಲ್ಲೂರಪ್ಪ ಹಾಗೂ ಕೆಎಸ್ಆರ್ಟಿಸಿ ಚಾಲಕ ನೀಲವೆಂಕಟೇಶ್ ಎಂಬುವರ ವಿರುದ್ಧವೇ ದೂರು ದಾಖಲಾಗಿದ್ದು, ಕೆಜಿಎಫ್ ಡಿಪೋನ ಕಂಡಕ್ಟರ್ ಯೋಗೇಂದ್ರ ಬಾಬು ನೀಡಿದ ದೂರಿನನ್ವಯ ರಾಬರ್ಟ್ಸನ್ಪೇಟೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನೆ ವಿವರ: ಸೆ.3 ರಂದು ಕೆಜಿಎಫ್ನಿಂದ ಭಾಗಮಂಡಲಕ್ಕೆ ಹೋಗುತ್ತಿದ್ದ ಬಸ್ನಲ್ಲಿ ನೀಲವೆಂಕಟೇಶ್ ಚಾಲಕನಾಗಿ ಮತ್ತು ಯೋಗೇಂದ್ರ ಬಾಬು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಚಾಲಕ ನೀಲವೆಂಕಟೇಶ್ 15 ಕೆಜಿಯಷ್ಟು ಟೊಮೆಟೊವನ್ನು ಭಾಗಮಂಡಲಕ್ಕೆ ಬಸ್ನಲ್ಲಿ ಸಾಗಿಸುತ್ತಿದ್ದರು. ಅದಕ್ಕೆ ಒಂದು ಯೂನಿಟ್ ಟಿಕೆಟನ್ನು ಯೋಗೇಂದ್ರ ಬಾಬು ನೀಡಿದ್ದರು.
ಇದರಿಂದ ಚಾಲಕ ನೀಲವೆಂಕಟೇಶ್ ಕೋಪಗೊಂಡು ತನ್ನ ಸ್ನೇಹಿತ ಪ್ರಾಂಶುಪಾಲ ನಲ್ಲೂರಪ್ಪನಿಗೆ ಈ ಘಟನೆ ಬಗ್ಗೆ ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡಿದ್ದ ಪ್ರಾಂಶುಪಾಲ ನಲ್ಲೂರಪ್ಪ, ಫೋನಿನಲ್ಲಿ ನಿರ್ವಾಹಕ ಯೋಗೇಂದ್ರ ಬಾಬು ಅವರನ್ನು ಅಶ್ಲೀಲವಾಗಿ ಬೈದಿದ್ದರು.
ಇದಿಷ್ಟೇ ಅಲ್ಲದೆ ಸಂಘಟನೆಗಳ ಕಾರ್ಯ ಕರ್ತರೊಂದಿಗೆ ಬಂದು ಹೊಡೆಯುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಅವರು ಮಾತನಾಡಿದ್ದ ಅಶ್ಲೀಲ ಸಂಭಾಷಣೆ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಬಗ್ಗೆ ಸ್ಥಳೀಯ ಕೆಎಸ್ಆರ್ಟಿಸಿ ಡಿಪೋ ಅಧಿಕಾರಿಗಳು ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅವರ ಸೂಚನೆ ಮೇರೆಗೆ ಬುಧವಾರ ನಿರ್ವಾಹಕ ಯೋಗೇಂದ್ರ ಬಾಬು ರಾಬರ್ಟ್ಸನ್ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಎನ್ಸಿ ಪ್ರಕರಣ ದಾಖಲಿಸಿದ್ದು, ಗುರುವಾರ (ಸೆ.7) ನ್ಯಾಯಾಲಯದ ಅನುಮತಿ ಪಡೆದು ಮುಂದಿನ ಕ್ರಮ ಜರುಗಿಸಲಿದ್ದಾರೆ.