ಮೈಸೂರು: ಐದನೇ ತರಗತಿಯವರೆಗೆ ಆನ್ಲೈನ್ ಶಿಕ್ಷಣ ರದ್ದುಗೊಳಿಸಿ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಅದರಂತೆ ಪಿಯುವರೆಗೂ ಆನ್ಲೈನ್ ಶಿಕ್ಷಣ ರದ್ದುಪಡಿಸಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಆನ್ಲೈನ್ ಮೂಲಕ ಶಿಕ್ಷಣ ಕೊಡುವಂಥ ಪದ್ಧತಿ ಸರಿಯಾದದ್ದಲ್ಲ. ಮಕ್ಕಳಿಗೆ ಶಾಲೆಯಲ್ಲಿಯೇ ನೇರ ಪಾಠ ಮಾಡುವುದೇ ಆಗಬೇಕು. ತರಗತಿಯಲ್ಲಿ ಪಾಠ ಮಾಡುವಷ್ಟು ಪರಿಣಾಮಕಾರಿಯಾಗಿ ಆನ್ಲೈನ್ ನಲ್ಲಿ ಮಾಡುವ ಪಾಠ ಮಕ್ಕಳ ಮನಸ್ಸಿನಲ್ಲಿ ಉಳಿಯುವುದಿಲ್ಲ. ಆದ್ದರಿಂದ ಪಿಯುವರೆಗೆ ಆನ್ಲೈನ್ ಶಿಕ್ಷಣವನ್ನು ರದ್ದು ಮಾಡಬೇಕು ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದರು.
ನನ್ನ ಪ್ರಕಾರ ಹೇಳುವುದಾದರೆ ಅಕ್ಟೋಬರ್ ವರೆಗೂ ಶಾಲೆಗಳನ್ನು ಆರಂಭಿಸಬಾರದು. ಆ ಬಳಿಕ ಕೊರೊನಾ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು.