ಪಿರಿಯಾಪಟ್ಟಣ: ಪಟ್ಟಣದ ಜಿನ್ನಾ ತುಲ್ ಪಿರ್ದೋಷ ಮಸೀದಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರು ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಅನೇಕ ವರ್ಷಗಳಿಂದ ನಡೆದುಕೊಂಡು ಬಂದಂತಹ ಸೂಫಿ ಸಂತ ಪದ್ಧತಿಯ ಅಹಲೆಸುನ್ನತ್ ವಲ್ಲ ಪ್ರಕಾರ ಪ್ರಾರ್ಥನೆ ಸಲ್ಲಿಸಲಾಯಿತು. ಹಬ್ಬದಲ್ಲಿ ವೃತಧಾರಿಗಳು ಪ್ರಾರ್ಥನೆಯ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಬುಧವಾರ ಸಂಜೆ ಚಂದ್ರ ದರ್ಶನವಾಗುತ್ತಿದ್ದಂತೆ ಗುರುವಾರ ರಂಜಾನ್ ಆಚರಣೆಗಾಗಿ ನಿರ್ಧಾರ ಕೈಗೊಂಡರು. ತಾಲೂಕಿನ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ ನಡೆಯಿತು. ಮಧ್ಯಾಹ್ನ ವಿಶೇಷ ಖಾದ್ಯವಾದ ಸುರಕುರಮಾ ಸವಿದು ಹಬ್ಬ ಆಚರಿಸಿದರು.
ಮೌಲ್ವಿಗಳು ಶಾಂತಿ, ಸಮೃದ್ಧಿ, ಉತ್ತಮ ಮಳೆ ಹಾಗೂ ಬೆಳೆಗಾಗಿ ಬೇಡಿಕೊಂಡರು. ಬಡವರ ಮನೆಗಳಿಗೆ ತೆರಳಿದ ಜನರು ಬಟ್ಟೆ, ಹಣ ನೀಡಿ ಹಬ್ಬದ ಶುಭಾಶಯ ಕೋರಿದರು. ಪ್ರಾರ್ಥನೆ ನಂತರ ನಾನಾ ಧರ್ಮೀಯರಿಗೆ ಶುಭ ಕೋರಿದ ಮುಸ್ಲಿಂ ಸಮುದಾಯದವರು ಅಪ್ಪುಗೆಯ ಮೂಲಕ ಈದ್ ಮುಬಾರಕ್ ಎಂದರು.
ಮಸೀದಿಯ ಧರ್ಮ ಗುರುಗಳಾದ ಮೌಲಾನ ಲಾಯಿಕ ಅಹಮದ್ ಅವರ ನೇತೃತ್ವದಲ್ಲಿ ವಿಶೇಷ ನಮಾಝ್ ನಿರ್ವಹಿಸಿದ ಬಳಿಕ ಧಾರ್ಮಿಕ ಪ್ರವಚನ ನೀಡಲಾಯಿತು. ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷರಾದ ಗಫಾರ್ ಅಹಮದ್ ಅವರು ವಿಶೇಷ ನಮಾಝ್ ಬಗ್ಗೆ ಮಾಹಿತಿ ನೀಡಿದರು.
ಪ್ರಾರ್ಥನೆಯಲ್ಲಿ ಮಸೀದಿ ಉಪಾಧ್ಯಕ್ಷ ಸೈಯದ್ ಅನ್ಸಾರ್, ಕಾರ್ಯದರ್ಶಿ ಮಹಮ್ಮದ್ ಅತಮಲ, ಮುಖಂಡರಾದ ನೌಪಿವುಲ್ಲಾ, ನೌಷಾದ್, ಮಹಮದ್ ರಜಾಕ್, ಜಾವೀದ್ ಖಾನ್, ಗೌಸ್ ಬೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.