ರಾಮನಗರ: ವಾಲ್ಮೀಕಿ ಮತ್ತು ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷಗಳಾದ ಬಿಜೆಪಿ – ಜೆಡಿಎಸ್ ಬೆಂಗಳೂರಿನಿಂದ ಮೈಸೂರುವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ವೇಳೆ ಬಿಜೆಪಿ ಕಾರ್ಯಕರ್ತೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಜರುಗಿದೆ.
vijayapatha.in - ವಿಜಯಪಥ.ಇನ್ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ. ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ.
ಆಗಸ್ಟ್ 5ರ ಸೋಮವಾರವಾದ ಇಂದು ಮೂರನೇ ದಿನ ದೋಸ್ತಿ ಪಕ್ಷಗಳ ಪಾದಯಾತ್ರೆ ರಾಮನಗರ ಜಿಲ್ಲೆ ಪ್ರವೇಶಿಸಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತೆ ಗೌರಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪಾದಯಾತ್ರೆ ಚನ್ನಪಟ್ಟಣ ತಲುಪಿದ್ದು, ಈ ವೇಳೆ ಬೆಂಗಳೂರಿನ ಬಸವನಗುಡಿಯ ಬಿಜೆಪಿ ಕಾರ್ಯಕರ್ತೆ ಗೌರಮ್ಮ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಚನ್ನಪಟ್ಟಣದಲ್ಲಿ ಪಾದಯಾತ್ರೆ ನಡೆಯುತ್ತಿರುವ ವೇಳೆ ಗೌರಮ್ಮ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಚನ್ನಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ, ಅಷ್ಟರಲ್ಲಾಗಲೇ ಗೌರಮ್ಮ ಕೊನೆಯುಸಿರೆಳೆದಿದ್ದಾರೆ.
ಗೌರಮ್ಮ ಅವರ ಮೃತದೇಹ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿದ್ದು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತ ಕಾರ್ಯಕರ್ತೆಯ ಅಂತಿಮ ದರ್ಶನ ಪಡೆದರು.