ದಾವಣಗೆರೆ: ಬಿಜೆಪಿ ತಾನು ಅಧಿಕಾರದಲ್ಲಿ ಇಲ್ಲದ ರಾಜ್ಯಗಳ ಹಕ್ಕುಗಳನ್ನು ಹತ್ತಿಕ್ಕುವ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಡಿ ಸೇರಿದಂತೆ ಹಲವು ಸಂಸ್ಥೆಗಳನ್ನು ಬಳಸಿಕೊಂಡು ಭಯ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.
ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸರಿಯಾದ ಚಿಂತನೆ ಮಾಡದೆ ಉಚಿತ ಭಾಗ್ಯಗಳ ಯೋಜನೆಗಳನ್ನು ಜಾರಿ ಮಾಡಿದೆ. ಇದಕ್ಕಾಗಿ 80 ಸಾವಿರ ಕೋಟಿ ರೂಪಾಯಿಗಳನ್ನು ಸಾಲ ಮಾಡಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ ಎಂದರು.
![](https://vijayapatha.in/wp-content/uploads/2023/09/12-Sep-mu-chandru-1-300x161.jpg)
ಇನ್ನು ನೂರು ದಿನಗಳಲ್ಲಿ ಹೇಳಿದ್ದನ್ನು ಮಾಡಿದ್ದೇವೆ ಎಂದು ಪ್ರಚಾರ ಮಾಡಿದ್ದಾರೆ, ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮೂರು ತಿಂಗಳಿನಿಂದ ಹಣ ಕೊಟ್ಟಿಲ್ಲ ಎಂದು ಆರೋಪಿಸಿದರು.
ಹಳ್ಳಿಗಳಿಗೆ ತೆರಳಿ ಪಕ್ಷ ಸಂಘಟನೆ: ಈ ವರ್ಷ ಪೂರ್ತಿ ಬಹುತೇಕ ಚುನಾವಣೆ ವರ್ಷವಾಗಿರುವ ಕಾರಣ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳನ್ನು ನಡೆಸಬೇಕಾಗಿದೆ. ಜನರ ಬಳಿ ನೇರವಾಗಿ ಸಂಪರ್ಕ ಸಾಧಿಸುವ ಮೂಲಕ ಸಂಘಟನೆ ಗಟ್ಟಿಗೊಳಿಸಲು ಪ್ರವಾಸ ಮಾಡಲಾಗುತ್ತಿದೆ ಎಂದು ಹೇಳಿದರು.
ನಮ್ಮದು ಸಾಮಾನ್ಯ ಜನರ ಪಕ್ಷವಾಗಿದ್ದು 10-15 ಹಳ್ಳಿಗಳ ಜನರನ್ನು ಒಂದು ಕಡೆ ಸೇರಿಸಿ, ‘ಬನ್ನಿ ಮಾತಾಡೋಣ, ಎಲ್ಲ ಸೇರೋಣ’ ಎನ್ನುವ ಘೋಷವಾಕ್ಯ ಇಟ್ಟುಕೊಂಡು, ಜನಗಳ ಜತೆಯಲ್ಲಿ ಚರ್ಚೆ ಮಾಡಿ, ನಮ್ಮ ಪಕ್ಷ ದೆಹಲಿಯಲ್ಲಿ ಮಾಡಿದ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಸ್ವಂತ ಬಲದಿಂದ ಚುನಾವಣೆಯಲ್ಲಿ ಸ್ಪರ್ಧೆ: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಥವಾ ಬಿಬಿಎಂಪಿ ಯಾವುದೇ ಚುನಾವಣೆ ಬಂದರೂ ಆಮ್ ಆದ್ಮಿ ಪಕ್ಷ ಸ್ವಂತ ಬಲದಿಂದ ಸ್ಪರ್ಧೆ ಮಾಡುವುದು ಎಂದು ಮುಖ್ಯಮಂತ್ರಿ ಚಂದ್ರು ಸ್ಪಷ್ಟಪಡಿಸಿದರು.
ಪಕ್ಷ ಸಂಘಟನೆ ಜತೆಯಲ್ಲೇ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಕೂಡ ಮಾಡಲಾಗುವುದು. ಕೆಲವು ಕಡೆ ಮೀಸಲಾತಿ ಇರುವುದರಿಂದ ಅದನ್ನೆಲ್ಲ ನೋಡಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಈಗಾಗಲೇ ಪಕ್ಷ ಸಂಘಟನೆಯ ಕಾರ್ಯವನ್ನು ಆರಂಭಿಸಿದ್ದು, ತುಮಕೂರು, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯನ್ನು ಮುಗಿಸಿಕೊಂಡು ದಾವಣಗೆರೆಗೆ ಬಂದಿರುವುದಾಗಿ ಹೇಳಿದರು.
ದಾವಣಗೆರೆ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ನೇಮಕ: ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಜಿಲ್ಲೆಯ ಹಿರಿಯ ಮುಖಂಡ ಕೆ.ಎಸ್. ರಾಘವೇಂದ್ರ, ದಾವಣಗೆರೆ ಜಿಲ್ಲೆ ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ, ಸಂಘಟನಾ ಕಾರ್ಯದರ್ಶಿ ಗಣೇಶ್ ದುರ್ಗದ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ರವೀಂದ್ರ ಕೆ., ಅದಿಲ್ ಖಾನ್, ಯುವ ಘಟಕದ ಅಧ್ಯಕ್ಷರಾಗಿ ಪ್ರಸಾದ್ ಮಲ್ಲಿನಾಥ್, ಧರ್ಮಾ ನಾಯಕ್ ಎಸ್‌ಸಿ ಎಸ್‌ಟಿ ಘಟಕದ ಅಧ್ಯಕ್ಷರು, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಸಮೀರ್ ಹಸನ್ ಅವರನ್ನು ನೇಮಕ ಮಾಡಲಾಗಿದೆ. ಇವರು ಪೂರ್ಣಾವಧಿಗೆ ನೇಮಕ ಮಾಡಿಲ್ಲ, ಸದ್ಯ ಪಕ್ಷದ ಚಟುವಟಿಕೆ ಆರಂಭಿಸಲು ಇವರನ್ನು ನೇಮಕ ಮಾಡಲಾಗಿದೆ.
ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಉಮಾಶಂಕರ್, ಜಿಲ್ಲಾಧ್ಯಕ್ಷ ಶಿವಕುಮಾರಪ್ಪ, ಸಂಘಟನಾ ಕಾರ್ಯದರ್ಶಿ ಗಣೇಶ್ ದುರ್ಗದ್ ಸೇರಿದಂತೆ ಹಲವು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)