ಬೆಂಗಳೂರು: ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರ ಕೈಬಿಡಬೇಕು ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಆಗ್ರಹಿಸಿದ್ದಾರೆ.
ಅಧಿಕಾರಿಗಳು ದುಡ್ಡು ಹೊಡೆಯುತ್ತಾರೆ ಎಂದು ಹೇಳಿ ಕಾಯಿದೆಯನ್ನು ರದ್ದು ಪಡಿಸುವುದರಲ್ಲಿ ಅರ್ಥವಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕಣ್ಣಿಟ್ಟು ಕ್ರಮ ಕೈಗೊಳ್ಳಬೇಕು. ಇದೀಗ ಕೈಗೊಂಡಿರುವ ಕ್ರಮದಿಂದ ಬಹುರಾಷ್ಟ್ರೀಯ ಕಂಪನಿಗಳಷ್ಟೇ ಪ್ರಯೋಜನ ಪಡೆಯಲಿವೆ ಎಂದು ಹೇಳಿದ್ದಾರೆ.
ಸಿಎಂ ಬಿಎಸ್ ವೈ ಅವರಿಗೆ ಸುದೀರ್ಘ ಪತ್ರ ಬರೆದಿರುವ ಅವರು ಕರ್ನಾಟಕ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರದ್ದುಪಡಿಸಬೇಕು. ಕೇರಳ ರಾಜ್ಯದಲ್ಲಿ ಕುಟುಂಬವೊಂದು ಗರಿಷ್ಠ 20ಎಕರೆ ಜಮೀನು ಹೊಂದಬಹುದು ತಮಿಳುನಾಡಿನಲ್ಲಿ 30 ಎಕರೆ ಆಂಧ್ರಪ್ರದೇಶದಲ್ಲಿ 54 ಎಕರೆ ಮತ್ತು ಬಿಹಾರದಲ್ಲಿ 45 ಎಕರೆ ಭೂಮಿ ಹೊಂದಬಹುದಾಗಿದೆ. ಆದರೆ ಕರ್ನಾಟಕದಲ್ಲಿ216ಎಕರೆ ಭೂಮಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗುತ್ತಿದೆ. ಇನ್ನು ಎಲ್ಲಾ ರಾಜ್ಯಗಳಲ್ಲಿ ತೋಟದ ಭೂಮಿಯನ್ನು 10 ಎಕರೆ ಹೊಂದ ಬಹುದಾದರೆ ನಮ್ಮಲ್ಲಿ 56 ಎಕರೆ ಮತ್ತು ನೀರಾವರಿ ಭೂಮಿಯನ್ನು 80 ಎಕರೆಯವರೆಗೆ ಹೊಂದಲು ಅವಕಾಶ ಮಾಡಿಕೊಡಲು ಹೊರಟಿರುವುದರಿಂದ ನೀರಾವರಿ ಭೂಮಿಯು ಬಂಡವಾಳಶಾಹಿಗಳ ಪಾಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ರಾಜ್ಯಕ್ಕೆ ಬಂಡವಾಳ ಹರಿವು ಹೆಚ್ಚಾಗುತ್ತದೆ ಎಂದು ರಾಜ್ಯ ಸರಕಾರ ವಾದಿಸುತ್ತಿದೆ. ವಾಸ್ತವ ಏನೆಂದರೆ ದೇಶಗಳ ಮುಂದಿನ ಭವಿಷ್ಯ ರೂಪುಗೊಳ್ಳುವುದೇ ಜ್ಞಾನ ಆಧಾರಿತ ಆರ್ಥಿಕತೆಯಿಂದ ಲೇ ಹೊರತು ಭೂಮಿಯನ್ನು ಆಧರಿಸಿ ಅಲ್ಲ ಎಂಬುದನ್ನು ತಿಳಿಯಬೇಕು ಎಂದು ಸಲಹೆ ನೀಡಿದ್ದಾರೆ.
ಪತ್ರವನ್ನು ಟ್ವೀಟ್ ಮಾಡಿರುವ ಅವರು ಕೇಂದ್ರ ಹಾಗೂ ರಾಜ್ಯಗಳಲ್ಲಿ ಒಂದೇ ಪಕ್ಷದ ಸರಕಾರಗಳಿದ್ದರೂ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ನಂಬಿಸಿ ರೈತರು, ಬಡವರು, ಹಿಂದುಳಿದವರು, ದಮನಿತರು ಹಾಗೂ ಶೋಷಣೆಗೊಳಗಾದವರ ಮೈಯಲ್ಲಿ ಜಾಗವೇ ಇಲ್ಲದಷ್ಟು ಪ್ರಮಾಣದಲ್ಲಿ ಇರಿಯುತ್ತಿದ್ದರೆ, ಇದು ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ನಿಮ್ಮಂಥವರಿಗೆ ಶೋಭೆ ತರುವ ವಿಚಾರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಹೆಸರಿನಲ್ಲಿ ಕಾಯ್ದೆಯ ಆತ್ಮವನ್ನೇ ಕೊಲ್ಲಲು ಹೊರಟಿರುವ ತೀರ್ಮಾನವನ್ನು ತಕ್ಷಣವೇ ಕೈಬಿಡಬೇಕು ಜತೆಗೆ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಈ ಕ್ಷಣದಿಂದಲೇ ರದ್ದುಪಡಿಸಬೇಕು ಈ ಎರಡೂ ಕಾಯಿದೆಗಳನ್ನು ಕೇಂದ್ರವು ಕೈಬಿಡುವಂತೆ ರಾಜ್ಯ ಸರಕಾರ ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.