NEWSನಮ್ಮಜಿಲ್ಲೆ

ಭ್ರಷ್ಟಾಚಾರ ಎಸಗಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಉಪಲೋಕಾಯುಕ್ತ ನ್ಯಾ. ಪಾಟೀಲ್

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಭ್ರಷ್ಟಾಚಾರದಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಲೋಕಾಯುಕ್ತ ಸಂಸ್ಥೆಯ ಅಗತ್ಯತೆ ಹಾಗೂ ಕಾಯ್ದೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಕೇಸುಗಳಲ್ಲಿ ದೂರು ಮತ್ತು ಆಪಾದನೆ ಎಂಬ ಎರಡು ವಿಧ ಇವೆ. ತನ್ನ ಸಮಸ್ಯೆ ಅಥವಾ ತನಗೆ ಅನ್ಯಾಯವಾದಲ್ಲಿ ಅಂತಹ ವ್ಯಕ್ತಿ ದೂರು ನೀಡಬಹುದು, ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ಲೋಪ ಮುಂತಾದವುಗಳ ವಿರುದ್ಧ ಆಪಾದನೆಯ ಕೇಸು ಹಾಕಬಹುದಾಗಿದೆ ಎಂದು ಹೇಳಿದರು.

ಬಹುತೇಕ ಹಳ್ಳಿಗಳಲ್ಲಿ ಇನ್ನೂ ಶೌಚಾಲಯಗಳನ್ನು ಬಳಸದೆ, ಬಯಲು ಬಹಿರ್ದೆಸೆಗೆ ಹೋಗುತ್ತಾರೆ ಎಂದು ಕೆಂಡಕಾರಿದ ಉಪಲೋಕಾಯುಕ್ತರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ತಾಲೂಕಿನ 10 ಗ್ರಾಮ ಪಂಚಾಯ್ತಿಗಳನ್ನು ಅಯ್ಕೆ ಮಾಡಿಕೊಂಡು ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಮಾಡಬೇಕು. ಬಯಲು ಬಹಿರ್ದೆಸೆ ಹೋಗುವುದನ್ನು ತಡೆಯದಿದ್ದರೆ ಇಒಗಳ ವಿರುದ್ಧ ಕೇಸ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

10 ಗ್ರಾಮ ಪಂಚಾಯ್ತಿಗಳ ಪ್ರತಿಯೊಂದು ಹಳ್ಳಿಗಳಲ್ಲಿ ಎಷ್ಟು ಜನ ಫಲಾನುಭವಿಗಳಿದ್ದಾರೆ. ಎಷ್ಟು ಜನ ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಎಷ್ಟು ಜನ ಕಟ್ಟಿಸಿಕೊಂಡಿಲ್ಲ. ಕಟ್ಟಿಸಿಕೊಂಡವರು ಎಷ್ಟು ಜನ ಬಳಕೆ ಮಾಡುತ್ತಾರೆ, ಎಷ್ಟು ಜನ ಬಳಕೆ ಮಾಡುತ್ತಿಲ್ಲ ಹಾಗೂ ಬಳಕೆ ಮಾಡದಂಥವರ ವಿರುದ್ಧ ಯಾವ ಕ್ರಮಕೈಗೊಂಡಿದ್ದೀರಾ ಎಂಬ ಬಗ್ಗೆ ಸಂಪೂರ್ಣ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಈ ಸಂಬಂಧ ನಿರ್ಲಕ್ಷ್ಯ ತೋರುವ ತಾಪಂ ಇಒಗಳ ವಿರುದ್ಧ ಕರ್ತವ್ಯ ಲೋಪ ಮುಂತಾದ ಗಂಭೀರ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು. ಈ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಹೊಣೆಗಾರರನ್ನಾಗಿಸಿದಲ್ಲಿ ಮಾತ್ರ ಯಶ ಸಾಧಿಸಲು ಸಾಧ್ಯ ಎಂದು ಕಿವಿ ಮಾತು ಹೇಳಿದ ಅವರು ಎಲ್ಲರೂ ಕೂಡಿ ಗ್ರಾಮಸ್ಥರಿಗೆ ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ತಿದ್ದುಪಡಿ ತರಲಾಗಿದೆ. ಉಚ್ಚ ನ್ಯಾಯಾಲಯದ ಪೀಠ ಬಂತು ಹತ್ತಾರು ಯೋಜನೆಗಳು-ಅಭಿವೃದ್ಧಿ ಕಾಮಗಾರಿಗಳಾದರೂ ಇಲ್ಲಿನ ಜನರ ಜೀವನ ಮಟ್ಟ ಇನ್ನೂ ಸುಧಾರಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು. 371ಜೆ ಮೀಸಲಾತಿ ಅಡಿ ಆಯ್ಕೆಯಾದ ಇಲ್ಲಿನ ಅಧಿಕಾರಿಗಳು ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿರಬೇಕಿದೆ. ಸ್ವ-ಹಿತಾಸಕ್ತಿ ಬದಿಗೊತ್ತಿ ಸಾರ್ವಜನಿಕೆ ಸೇವೆಗೆ ನಿಮ್ಮನು ನೀವು ಅರ್ಪಿಸಿಕೊಳ್ಳಿ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಕೆರೆಗಳ ಸಂಖ್ಯೆ, ಅತಿಕ್ರಮಣ, ತೆರವು ಹಾಗೂ ಜೀರ್ಣೋದ್ಧಾರಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ ನ್ಯಾ. ಬಿ.ಎಸ್.ಪಾಟೀಲ ಅವರು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾರ್ವಜನಿಕರಿಗೆ ಸ್ವಚ್ಛ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಡಾ.ದಿಲೀಷ್ ಶಶಿ ಮಾತನಾಡಿ, ನರೇಗಾ ಮತ್ತು ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಾದ್ಯಂತ ಪಾಳುಬಿದ್ದಿದ್ದ 100 ಕಲ್ಯಾಣಿಗಳಲ್ಲಿ ಗುರುತಿಸಿ, ಪುನಶ್ಚೇತನ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇದೂವರೆಗೆ 40 ಕಲ್ಯಾಣಿಗಳು ಪುನಶ್ಚೇತನದ ಪರಿಣಾಮ ನೀರಿನಿಂದ ಮೈದುಂಬಿಕೊಂಡಿವೆ. ಇದಲ್ಲದೆ ಪ್ರತಿ ಹಳ್ಳಿಯಲ್ಲಿ ಕೆರೆ ನಿರ್ಮಾಣಕ್ಕೆ ಸರ್ಕಾರ ನಿರ್ದೇಶನ ಬಂದಿದ್ದು, ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು.

2012ರ ಬೇಸ್ಡ್ ಲೈನ್ ಸಮೀಕ್ಷೆಯಿಂದ ಹೊರಗುಳಿದ 52438 ಕುಟುಂಬಗಳನ್ನು ಗುರುತಿಸಿದ್ದು, ಇದೂವರೆಗೆ 48218 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ 2021-22ನೇ ಸಾಲಿನಲ್ಲಿಯೂ 9000 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ. ಜಿಲ್ಲೆಯಾದ್ಯಂತ 445 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, 350 ಕಾರ್ಯಚರಣೆಯಲ್ಲಿವೆ ಎಂದು ಮಾಹಿತಿ ನೀಡಿದರು.

ವಸತಿ ನಿಲಯ ಸ್ವಚ್ಛವಾಗಿರಲಿ: ವಸತಿ ನಿಲಯ ಸ್ವಚ್ಛವಾಗಿರಬೇಕು. ಅಲ್ಲಿ ಅಭ್ಯಾಸ ಮಾಡುವ ಮಕ್ಕಳು ಭಾವಿ ಪ್ರಜೆಗಳಾಗಿದ್ದು, ಅವರಲ್ಲಿ ಉತ್ತಮ ಶಿಸ್ತನ್ನು ತರಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ಕೊಡಿ. ಕೋವಿಡ್ ಕಾರಣ ಒಂದೂವರೆ ವರ್ಷದಿಂದ ಶಾಲೆ ತೆರೆದಿಲ್ಲ. ಈಗ ಸರ್ಕಾರ ಹಂತ-ಹಂತವಾಗಿ ತೆರೆಯುತ್ತಿದ್ದು, ಮಕ್ಕಳು ಬಹುತೇಕ ಪಠ್ಯಗಳನ್ನು ಮರೆತಿರುತ್ತಾರೆ. ಮಕ್ಕಳಲ್ಲಿ ಮತ್ತೇ ಓದುವ ಹಂಬಲ ಮೂಡಿಸುವುದರ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳಬೇಕಾದ ಕೆಲಸ ಶಿಕ್ಷಕರದ್ದಾಗಿದೆ ಎಂದರು.

ಟಾಸ್ಕ್ ಫೋರ್ಸ್ ಸಂವೇದನಾಶೀಲವಾಗಿರಲಿ: ಕೋವಿಡ್ ಮೊದಲನೇ ಮತ್ತು ಎರಡನೇ ಅಲೆ ಕಾರಣ ಬಹಳಷ್ಟು ಯುವಕರು ಮತ್ತು ಮೇಧಾವಿಗಳನ್ನು ಕಳೆದುಕೊಂಡಿವೆ. ತಜ್ಞರ ಪ್ರಕಾರ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

ಮುಖ್ಯವಾಗಿ ರೋಗ ಹರಡದಂತೆ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿರುವ ಪಿಡಿಒ ಜನಪ್ರತಿನಿಧಿಗಳು ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಒಳಗೊಂಡ ಟಾಸ್ಕ್ ಫೋರ್ಸ್ ಕಮಿಟಿ ಹೆಚ್ಚು ಸಂವೇದನಾಶೀಲವಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಕಮಿಟಿ ಸದಸ್ಯರಿಗೆ ಆರೋಗ್ಯ ಇಲಾಖೆಯಿಂದ ಕಾರ್ಯಾಗಾರ ಆಯೋಜಿಸಿ ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ, ಪ್ರಸ್ತುತ ಕೋವಿಡ್ ಪಾಸಿಟಿವ್ ಪ್ರಮಾಣ ಶೇ.0.2ರಷ್ಟಿದೆ. ಕಳೆದ 2 ತಿಂಗಳಿನಿಂದ ಪ್ರತಿದಿನ ಒಂದಂಕಿಯಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಸಂಭಾವ್ಯ ಮೂರನೇ ಅಲೆ ತಡೆಗಟ್ಟಲು ಜಿಮ್ಸ್ ಆಸ್ಪತ್ರೆಯಲ್ಲಿ 100 ಹಾಸಿಗೆಯ ಎಸ್.ಎನ್.ಸಿ.ಯೂ ಘಟಕ ಸ್ಥಾಪಿಸಿದ್ದು, ತಾಲೂಕಾ ಆಸ್ಪತ್ರೆಯಲ್ಲಿ ಪ್ರತ್ಯೇಕ 40 ಹಾಸಿಗೆಯ ನಿಗಾ ವಾರ್ಡ್ ಸ್ಥಾಪಿಸಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಪ್ರಮಾಣ ಹೆಚ್ಚಿಸಲಾಗಿದೆ.

ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 500 ಎಲ್.ಪಿ.ಎಂ. ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ ಕಾರ್ಯ ನಡೆದಿದೆ. ಮುಂದುವರೆದು ಈ ಆಸ್ಪತ್ರೆಗಳಲ್ಲಿ ಜಂಬೋ ಸಿಲಿಂಡರ್ ಮತ್ತು ಆಕ್ಸಿಜನ್ ಕನ್ಸಂಟ್ರೇಟರ್ ಸಹ ಒದಗಿಸಲಾಗಿದೆ. ಜಿಲ್ಲೆಯಲ್ಲಿ ತೀವ್ರ ಅಪೌಷ್ಠಿಕತೆವಿರುವ 623 ಮತ್ತು ಮಧ್ಯಮ ತೀವ್ರ ಅಪೌಷ್ಠಿಕತೆವಿರುವ 26462 ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕ ಪುನರ್ವಸತಿ ಕೇಂದ್ರದ ಮೂಲಕ ಪೌಷ್ಠಿಕ ಆಹಾರ ನೀಡುವುದರ ಜೊತೆಗೆ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸಿಮಿ ಮರಿಯಮ್ ಜಾರ್ಜ್, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಲೋಕಾಯುಕ್ತ ಎಸ್.ಪಿ. ಸತೀಷ್ ಎಸ್. ಚಿಟಗುಬ್ಬಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು