ನ್ಯೂಡೆಲ್ಲಿ: ಮುಚ್ಚಿದ ಲಕೋಟೆಗಳಲ್ಲಿ ಮಾಹಿತಿ ಸಲ್ಲಿಸಲು ದಾವೆದಾರರಿಗೆ ಅವಕಾಶ ನೀಡುವ ವ್ಯವಸ್ಥೆಗೆ ಅಂತ್ಯ ಹಾಡಲು ಚಿಂತಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಸಮಾನ ಶ್ರೇಣಿ ಸಮಾನ ಪಿಂಚಣಿ (ಒಆರ್‌ಒಪಿ) ಯೋಜನೆಯಡಿ ಯೋಧರಿಗೆ ಕೇಂದ್ರ ಸರ್ಕಾರ ಪಾವತಿಸಬೇಕಾದ ಬಾಕಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಈ ವಿಚಾರ ತಿಳಿಸಿದರು.
![](https://vijayapatha.in/wp-content/uploads/2020/05/22-May-high-court-300x161.png)
ದೇಶದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ಸೋಮವಾರ ರಕ್ಷಣಾ ಸಚಿವಾಲಯದ ಪರವಾಗಿ ಬಾಕಿ ಪಾವತಿಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಹಸ್ತಾಂತರಿಸಿದರು. ಆದರೆ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಅದನ್ನು ಪ್ರತಿವಾದಿಗಳೊಂದಿಗೆ ಹಂಚಿಕೊಳ್ಳುವಂತೆ ಸೂಚಿಸಿತು.
ದಯವಿಟ್ಟು ಮುಚ್ಚಿದ ಲಕೋಟೆಯಲ್ಲಿರುವ ಮಾಹಿತಿಯನ್ನು ಪ್ರತಿವಾದಿಯೊಂದಿಗೆ ಹಂಚಿಕೊಳ್ಳಿ. ನಾವು ಮೊಹರು ಮಾಡಿದ ಲಕೋಟೆಗಳಲ್ಲಿ ವರದಿ ಸ್ವೀಕರಿಸುವುದನ್ನು ಪಾಲಿಸಿದರೆ ಹೈಕೋರ್ಟ್‌ಗಳೂ ಅದನ್ನೇ ಪಾಲಿಸುವುದರಿಂದ ಇದಕ್ಕೆ ಅಂತ್ಯ ಹಾಡಲು ಬಯಸುತ್ತೇವೆ ಎಂದು ಸಿಜೆಐ ಹೇಳಿದರು.
ನಾನು ವೈಯಕ್ತಿಕವಾಗಿ ಮೊಹರು ಮಾಡಿದ ಲಕೋಟೆಗಳಿಗೆ ವಿರುದ್ಧವಿದ್ದೇನೆ. ನ್ಯಾಯಾಲಯದಲ್ಲಿ ಪಾರದರ್ಶಕತೆ ಇರಬೇಕು ನಾವು ಮುಚ್ಚಿದ ಲಕೋಟೆಯನ್ನು ಸ್ವೀಕರಿಸಲು ಮುಂದಾದರೆ ಹೈಕೋರ್ಟ್‌ಗಳೂ ಇದನ್ನೇ ಅನುಸರಿಸುತ್ತವೆ. ಹೀಗಾಗಿ ಇದಕ್ಕೆ ಅಂತ್ಯಹಾಡಬೇಕಿದೆ ಎಂದು ಸಿಜೆಐ ಹೇಳಿದರು.
ಇದು ಆದೇಶಗಳನ್ನು ಜಾರಿಗಳಿಸುವುದಕ್ಕೆ ಸಂಬಂಧಿಸಿದ ವಿಚಾರ. ಇಲ್ಲಿ ಗುಟ್ಟು ಮಾಡುವಂಥದ್ದೇನಿದೆ? ನೀವು ಪ್ರತಿವಾದಿಗಳಿಗೆ ಲಕೋಟೆಯಲ್ಲಿರುವ ಪ್ರತಿಯನ್ನು ನೀಡಬೇಕು. ಮುಚ್ಚಿದ ಲಕೋಟೆ ಎಂಬುದು ಸಂಪೂರ್ಣ ಇತ್ಯರ್ಥಗೊಂಡ ನ್ಯಾಯಿಕ ತತ್ವಗಳಿಗೆ ವಿರುದ್ಧವಾದುದಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಹಂತದಲ್ಲಿ ಅಟಾರ್ನಿ ಜನರಲ್ ಒತ್ತಾಯಿಸಿದರೂ ಸಿಜೆಐ ಅದಕ್ಕೆ ಮಣೆ ಹಾಕಲಿಲ್ಲ. ಕ್ಷಮಿಸಿ, ಕ್ಷಮಿಸಿ ನಾವು ಈ ಮುಚ್ಚಿದ ಲಕೋಟೆ ಪಡೆಯುವುದಿಲ್ಲ. ದಯವಿಟ್ಟು ಅದನ್ನು ಹಿಂದಕ್ಕೆ ತೆಗೆದುಕೊಳ್ಳಿ, ಇಲ್ಲವೇ ಓದಿ ಎಂದು ಸಿಜೆಐ ಹೇಳಿದರು. ಬಳಿಕ ಅಟಾರ್ನಿ ಜನರಲ್ ಅವರು ಲಕೋಟೆಯಲ್ಲಿರುವ ವಿಚಾರವನ್ನು ಓದಲು ಮುಂದಾದರು.
ಕೇಂದ್ರ ಸರ್ಕಾರ ಜಾರಿಗೆ ತಂದ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯಡಿ ನಿಗದಿತ ಗಡುವಿನೊಳಗೆ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದರೂ ಆ ಗಡುವನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಬದಲಿಸಿದೆ ಎಂದು ದೂರಿ ಪಿಂಚಣಿ ನಿರೀಕ್ಷೆಯಲ್ಲಿರುವ ಸಿಬ್ಬಂದಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
(ಕೃಪೆ: ಬಾರ್ & ಬೆಂಚ್)
![](https://vijayapatha.in/wp-content/uploads/2024/02/QR-Code-VP-1-1-300x62.png)