ಮೈಸೂರು: ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಮತದಾರರಿಗೆ ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದರಾ? ಇದೇ ಅಂಶವೇ ಅವರ ಗೆಲುವಿಗೆ ಕಾರಣವಾಯ್ತಾ ಎಂಬ ಪ್ರಶ್ನೆಗೆ ಖುದ್ದ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹೌದು ಎನ್ನುವ ಉತ್ತರವನ್ನು ಕೊಟ್ಟು, ಬಾಯಿತಪ್ಪಿ ಚುನಾವಣಾ ಸತ್ಯ ಬಹಿರಂಗಪಡಿಸಿದ್ದಾರೆ.
ವರುಣಾ ಕ್ಷೇತ್ರದ ಚುನಾವಣೆ ವೇಳೆ ಕೊಟ್ಟ ಗಿಫ್ಟ್ ಬಗ್ಗೆ ಬಹಿರಂಗ ಸಭೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಚುನಾವಣೆ ವೇಳೆ ವರುಣಾ ಕ್ಷೇತ್ರದ ಮಡಿವಾಳ ಸಮುದಾಯ ಸಾವಿರಾರು ಜನರಿಗೆ ಕುಕ್ಕರ್, ಐರನ್ ಬಾಕ್ಸ್ ವಿತರಣೆ ಮಾಡಲಾಗಿತ್ತು ಎಂದು ಅವರೇ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಮಡಿವಾಳ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ, ಚುನಾವಣಾ ಸಮಯದಲ್ಲಿ ವರುಣಾ ಕ್ಷೇತ್ರದ ಮಡಿವಾಳ ಸಮುದಾಯ ಮತದಾರರಿಗೆ ಸಮುದಾಯದ ರಾಜ್ಯಾಧ್ಯಕ್ಷ ನಂಜಪ್ಪ ಕುಕ್ಕರ್, ಐರನ್ ಬಾಕ್ಸ್ ವಿತರಿಸಲು ಸಿದ್ದತೆ ಮಾಡಿಕೊಂಡಿದ್ದರು.
ಕಾರಣಾಂತರಗಳಿಂದ ಎರಡು ಮೂರು ಬಾರಿ ಮುಂದೂಡಲಾಗಿತ್ತು. ನಂತರ ತಂದೆಯವರಿಂದ ದಿನಾಂಕ ಪಡೆದು, ಅವರ ಕೈಯಲ್ಲೇ ಕುಕ್ಕರ್ ಹಾಗೂ ಐರನ್ ಬಾಕ್ಸ್ ಕೊಡಿಸಿದರು ಎಂದಿದ್ದಾರೆ.
ಆ ಕಾರ್ಯಕ್ರಮ ಬಹಳ ಯಶಸ್ವಿಯಾಯಿತು. ಮಡಿವಾಳ ಸಮುದಾಯದ ಹೆಚ್ಚು ಮತ ಬೀಳಲು ಕಾರಣವಾಯಿತು. ಮಡಿವಾಳ ಸಮುದಾಯ ಹೆಚ್ಚಿನ ಬೆಂಬಲ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದ ಎಂದು ಯತೀಂದ್ರ ಹೇಳಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)