ವಿಜಯಪುರ: ಸಾರ್ವಜನಿಕರಿಗೆ ಎಲ್‍ಪಿಜಿ ಅಗತ್ಯ ವಸ್ತುವಾಗಿದ್ದು ಇದನ್ನು ಲಾಕ್‍ಡೌನ್ ಪರಿಸ್ಥಿತಿಯಿಂದ ವಿನಾಯತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಲಾಕ್‍ಡೌನ್ ಅವಧಿ ಅಂಗವಾಗಿ ಎಲ್‍ಪಿಜಿ ವಿತರಕರಲ್ಲಿ ಇರುವ ಒಟ್ಟು ಸಿಬ್ಬಂದಿಯ ಪ್ರತಿಶತ 50 ರಷ್ಟು ಮಾತ್ರ ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಸೂಚಿಸಿದೆ. ಅದರಂತೆ ಸಿಲಿಂಡರ್‍ನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸಲು ಡಿಲೆವರಿ ಹುಡುಗರನ್ನು ರೋಟೇಟ್ ಮಾದರಿಯಲ್ಲಿ ಸೇವೆ ಬಳಸಿಕೊಳ್ಳಲಾಗುತ್ತಿದೆ. ಗ್ರಾಹಕರಿಗೆ ಸಿಲಿಂಡರನ್ನು ಮನೆ ಬಾಗಿಲಿಗೆ ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್‍ಪಿಜಿ ಸರಬರಾಜು ಕೊರತೆಯಾಗದಂತೆ ಎಲ್ಲಾ ಕಂಪನಿಗಳ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿ ಕೊರತೆಯಾಗದಂತೆ ನೋಡಿಕೊಳ್ಳು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಈ ಕುರಿತು ಜಿಲ್ಲೆಯ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಿದ್ದು, ಈವರೆಗೆ ಸಿಲಿಂಡರ್‌ಕೊರತೆಯ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಹಕರ ಸುರಕ್ಷತೆಯು ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದು ಹೆಚ್ಚಿನ ರೀತಿಯಲ್ಲಿ ಕಾಳಜಿವಹಿಸಲಾಗುತ್ತಿದೆ. ಗ್ರಾಹಕರು ಸಹ ಲಾಕ್‍ಡೌನ್ ಆದೇಶದನ್ವಯ ವಿತರಕರೊಂದಿಗೆ ಸಹಕರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅದಾಗಿಯೂ ಎಲ್‍ಪಿಜಿ ವಿತರಣೆಯಲ್ಲಿ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ಆಯಾ ತಹಶೀಲ್ದಾರ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುವ ಆಹಾರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ಸಲ್ಲಿಸಿ ಪರಿಹರಿಸಿಕೊಳ್ಳಬಹುದಾಗಿದೆ. ಅದೇ ರೀತಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆಹಾರ ಶಾಖೆ ದೂರವಾಣಿ ಸಂಖ್ಯೆ 08352-250419 ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್-19 ರ ಅವಧಿಯಲ್ಲಿ ಭಾರತ ಸರ್ಕಾರವು 2020ರ ಏಪ್ರಿಲ್‌ನಿಂದ ಜೂನ್‍ವರೆಗೆ ಮೂರು ತಿಂಗಳು ಎಲ್ಲ ಉಜ್ವಲಾ ಗ್ರಾಹಕರಿಗೆ ಉಚಿತ ಎಲ್.ಪಿ.ಜಿ ಘೋಷಿಸಿದೆ. ಸಿಲಿಂಡರ್ (ಮರುಪೂರಣಗಳ-ರೀಫಿಲ್ ಕಾಸ್ಟ್) ವೆಚ್ಚವನ್ನು ಮುಂಚಿತವಾಗಿ ಉಜ್ವಲಾ ಫಲಾನುಭವಿಗಳ ಬ್ಯಾಂಕ್‍ಖಾತೆಗೆ ತಿಂಗಳುವಾರು ವರ್ಗಾಯಿಸಲಾಗುತ್ತದೆ. ಈ ಹಣದಿಂದ ಉಜ್ವಲಾ ಗ್ರಾಹಕರು ಬ್ಯಾಂಕ್ ಖಾತೆಗೆ ಸರ್ಕಾರ ಜಮೆ ಮಾಡಿದ ಹಣದಿಂದ ಸಿಲಿಂಡರ್ ಖರೀದಿಸಬಹುದಾಗಿದೆ.
ಒಂದು ವೇಳೆ ಸರ್ಕಾರವು ಉಜ್ವಲಾ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಹಣದಿಂದ ಅವರು ಸಿಲಿಂಡರ್ ಖರಿದಿಸದೆ ಇದ್ದಲ್ಲಿ ಅವರಿಗೆ ಮುಂದಿನ 2020ರ ಮೇ ತಿಂಗಳಿಗೆ ಸಂಬಂಧಪಟ್ಟ ಹಣವನ್ನು ಸರ್ಕಾರ ಅವರ ಖಾತೆಗೆ ಹಣ ಭರಿಸುವುದಿಲ್ಲವೆಂದು ತಿಳಿಸಿದ್ದಾರೆ.
ಪ್ರಸ್ತುತ ನಮ್ಮ ದೇಶವು ಕೋವಿಡ್-19 ಬಿಕ್ಕಟ್ಟಿನೊಂದಿಗೆ ಹೋರಾಡುತ್ತದೆ. ಇದು ಜಾಗತಿಕವಾಗಿ ಹಲವಾರು ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದ್ದು ಈ ವೈರಸ್‍ನಿಂದ ಉಂಟಾಗಬಹುದಾದ ರೋಗದ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಜಾರಿಗೆ ತಂದಿದೆ. ಅದರ ಪ್ರಮುಖ ಭಾಗವಾಗಿ ಭಾರತ ದೇಶಾದ್ಯಂದ 25-03-2020 ರಿಂದ ದಿನಾಂಕ 14-04-2020 ರ ವರೆಗೆ ಸಂಪೂರ್ಣ ಲಾಕ್‍ಡೌನ್ ಮಾಡಲು ಆದೇಶಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ವೈರಸ್ ಕೆನ್ನಾಲಿಗೆ ಚಾಚದಂತೆ ತಡೆಗಟ್ಟಲು ಅನೇಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)