ಕೋಲಾರ: ಸಂಶಯ ಪೀಶಾಚಿ ಪತಿಯೊಬ್ಬ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದು, ಹಿಡಿಯಲು ಹೋದ ಪೊಲೀಸರ ಮೇಲೂ ಪಾಪಿ ಮಚ್ಚು ಬೀಸಿದ್ದಾನೆ. ಈ ವೇಳೆ ಗುಂಡು ಹಾರಿಸಿ ಆರೋಪಿಯ ಹಡೆಮುರಿಕಟ್ಟಿದ್ದಾರೆ ಪೊಲೀಸರು.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬಿ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಶಯ ಪಿಶಾಚಿಯಾಗಿದ್ದ ನಾಗೇಶ್ ಎಂಬಾತನೇ ಪತ್ನಿ ರಾಧಾಳನ್ನು (45) ಹತ್ಯೆ ಮಾಡಿರುವ ಪಾಪಿ.
ನಿತ್ಯ ಪತ್ನಿ ಜತೆಗೆ ನಿರಂತರವಾಗಿ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ. ಇಂದು ಕೂಡ ಕೌಟುಂಬಿಕ ಕಲಹ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಮಚ್ಚಿನಿಂದ ಮನಬಂದಂತೆ ರಾಧಾರ ಮೇಲೆ ಮಚ್ಚು ಬೀಸಿದ್ದಾನೆ. ಮಚ್ಚಿನೇಟಿಗೆ ರಾಧಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಅಡ್ಡ ಬಂದ ಮಾವನ ಮೇಲೂ ನಾಗೇಶ ಹಲ್ಲೆ ನಡೆಸಿದ್ದಾನೆ. ನಂತರ ಆರೋಪಿಯನ್ನು ಗ್ರಾಮಸ್ಥರೇ ಹಿಡಿದು ರೂಮಿನಲ್ಲಿ ಕೂಡಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರ ಮೇಲೂ ಆತ ಮಚ್ಚು ಬೀಸಿದ್ದು ಮಚ್ಚೇಟಿಗೆ ಇಬ್ಬರು ಗಂಭೀರವಾಗಿ ಗಾಯಗೊಂಡು ಅಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿಯನ್ನು ಬಂಧಿಸಲು ಪೊಲೀಸರು ಸ್ಥಳಕ್ಕೆ ತೆರಳಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರ ಮೇಲೂ ಕೂಡ ಮಚ್ಚು ಬೀಸಿದ್ದು, ಗ್ಯಾಸ್ ಸಿಲಿಂಡರ್ ಎತ್ತಿ ಎಸೆದು ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿ ಕಾಲಿಗೆ ಮತ್ತು ಕೈಯನ್ನು ಗಾಯಗೊಳಿಸಿ ಬಂಧಿಸಿದ್ದಾರೆ.
ಬಳಿಕ ಆರೋಪಿಯನ್ನು ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿಯನ್ನು ಹಿಡಿಯುವ ವೇಳೆ ಕೆಲ ಪೊಲೀಸರಿಗೂ ಗಾಯವಾಗಿದ್ದು, ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆಸ್ಪತ್ರೆಯ ಸುತ್ತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.