ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಮತ್ತು ಮೈಸೂರಿನ ಜನರ ಸುಗಮ ಸಂಚಾರಕ್ಕಾಗಿ ಶಾಸಕ ಟಿ.ಎಸ್.ಶ್ರೀವತ್ಸ ಆಯಕಟ್ಟಿನ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು.
ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ, ವೃತ್ತನಿರೀಕ್ಷಕ ಯೋಗೀಶ್ ಅವರೊಂದಿಗೆ ಹೆಚ್ಚು ಅಪಘಾತವಾಗುವ ಸ್ಥಳಗಳನ್ನು ಪರಿಶೀಲಿಸಿದರು. ಈ ವೇಳೆ ಮಾತಾಡಿದ ಶಾಸಕ ಶ್ರೀವತ್ಸ, ಮೈಸೂರು ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ಮತ್ತು ಮೈಸೂರಿನ ಜನರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳಬೇಕಿದೆ. ಇಂದು ಒಂದೆರಡು ಅಪಘಾತ ಸ್ಥಳಗಳನ್ನು ಎಸಿಪಿ ಅವರಿಗೆ ತೋರಿಸಿದ್ದೇನೆ ಎಂದು ಹೇಳಿದರು.
ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ, ಎಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ, ಯಾವ ಕಡೆ ಹಂಪ್ಸ್‌ಗಳನ್ನು ಹಾಕಬೇಕು ಎಂಬ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ ಎಂದರು.
ಮಾನಂದವಾಡಿ ಜಂಕ್ಷನ್, ಸೆಂಚುರಿ ಪಾರ್ಕ್, ನಜರ್‌ಬಾದ್ ಠಾಣೆ ಬಳಿ, ಹಳೆ ರಿಜೆನ್ಸಿ ಥಿಯೇಟರ್ ಬಳಿ, ಜಿಂಜರ್ ಹೋಟೆಲ್ ತಿರುವಿನ ಜಾಗದಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ. ಜನ ಇನ್ನು ಸಮಸ್ಯೆ ಹೇಳಿದ್ದಾರೆ. ಮೈಸೂರು ಸೌತ್ ಬಳಿ ಸಮಸ್ಯೆ ಇದೆ ಎಂದು ತಿಳಿಸಿದರು.
ಇನ್ನು ಜಾಕಿ ಫ್ಯಾಕ್ಟರಿ ನಾಡನಹಳ್ಳಿ ಪಾಳ್ಯ, ಎಚ್.ಡಿ.ಕೋಟೆ ಕಡೆ ಹೋಗುವ ರಸ್ತೆಗಳಲ್ಲೂ ಹಂಪ್ಸ್ ಹಾಕಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಶ್ರೀವತ್ಸ ತಿಳಿಸಿದರು.
ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ, ವೃತ್ತನಿರೀಕ್ಷಕ ಯೋಗೀಶ್, ನಗರಪಾಲಿಕೆ ಸದಸ್ಯೆ ಛಾಯಾದೇವಿ, ಸಿಂಡಿಕೇಟ್ ಸದಸ್ಯ ಗೋಕುಲ್ ಗೋವರ್ಧನ್, ಬಿಜೆಪಿ ಮುಖಂಡರಾದ ಪ್ರದೀಪ್ ಕುಮಾರ್, ಜೈರಾಮ್, ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಜಗದೀಶ್, ಕೆ.ಎಂ.ನಿಶಾಂತ್, ಮನೋಜ, ಪ್ರಸನ್ನ, ಕಿಶೋರ ಕಂಡೇಶ್, ಚೇತನ್ ಇದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)