ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲೂ ಕಳೆದ 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ವಜಾಗೊಂಡಿರುವ ನೌಕರರನ್ನು ಕೂಡಲೇ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಕಳೆದ 2022ರ ಡಿಸೆಂಬರ್ 31ರ ಶನಿವಾರ ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.
ಆದರೆ, ಅವರು ಈ ಭರವಸೆ ಕೊಟ್ಟು ಈಗಾಗಲೇ ಒಂದು ವಾರ ಕಳೆದು ಹೋಗಿದೆ. ಹೀಗಿದ್ದರೂ ಈವರೆಗೂ ಪ್ರಮುಖವಾಗಿ ಬಿಎಂಟಿಸಿಯಲ್ಲಿ ವಜಾಗೊಳಿಸಿರುವ ಉಳಿದ ನೌಕರರನ್ನು ವಾಪಸ್ ತೆಗೆದುಕೊಂಡಿಲ್ಲ.
ಅಂದು ಸಕಾರಣ ನೀಡದೆ ಏಕಾಏಕಿ ಕೆಲ ನೌಕರರನ್ನು ಯಾವುದೇ ದಾಖಲೆಗಳಿಲ್ಲದಿದ್ದರೂ ವಜಾ ಮಾಡಲಾಗಿದೆ. ಆದರೆ, ಈಗ ಅವರನ್ನು ವಾಪಸ್ ತೆಗೆದುಕೊಳ್ಳಬೇಕು ಎಂದರೆ ನಿಗಮದ ಅಧಿಕಾರಿಗಳು ಕಾನೂನಿನ ನೆಪಹೇಳುತ್ತಿದ್ದಾರೆ.
ಅಂದರೆ ಕೆಲ ಷರತ್ತುಗಳಲ್ಲಿ ಸುಮಾರು ಒಂದು ವರ್ಷದ ಹಿಂದೆಯೇ ಕೆಲವು ನೌಕರರನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಆ ಷರತ್ತಗಳಿಗೆ ಒಪ್ಪದ ನೌಕರರನ್ನು ಈವರೆಗೂ ಮರು ನೇಮಕ ಮಾಡಿಕೊಂಡಿಲ್ಲ. ಹೀಗಾಗಿ ಈ ಬಗ್ಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿರುವ ಅಧಿಕಾರಿಗಳು ನೌಕರರನ್ನು ಕಟ್ಟಿಹಾಕುವ ಹುನ್ನಾರದಿಂದ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಲ್ಲ ಎಂದು ಹೇಳಲಾಗುತ್ತಿದೆ.
ಇನ್ನು ಸುಮಾರು 21 ತಿಂಗಳಿಂದ ವಜಾಗೊಂಡಿರುವ ನೌಕರರು ಈಗಾಗಲೇ ಇತ್ತ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆದರೆ ಅದೆಲ್ಲವನ್ನು ವಾಪಸ್ ತೆಗೆದುಕೊಳ್ಳುತ್ತೇವೆ ನಮ್ಮನ್ನು ಬೇಷರತ್‌ಆಗಿ ವಾಪಸ್ ತೆಗೆದುಕೊಳ್ಳಿ ಎಂದು ನೂರಾರು ಮನವಿ ಪತ್ರಗಳನ್ನು ಸಿಎಂ, ಸಾರಿಗೆ ಸಚಿವರು ಮತ್ತು ಆಡಳಿತ ಮಂಡಳಿಗಳಿಗೂ ಸಲ್ಲಿಸಿದ್ದಾರೆ. ಆದರೆ ಅದಾವುದನ್ನು ಪರಿಗಣಿಸುವ ನಿಟ್ಟಿನಲ್ಲಿ ಇನ್ನೂ ಹೆಜ್ಜೆ ಇಟ್ಟಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಬಿಜೆಪಿ ರಾಜ್ಯ ಸರ್ಕಾರ ಸಾರಿಗೆ ನೌಕರರ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಒಂದು ರೀತಿ ಅಸಡ್ಡೆಯಿಂದಲೇ ನಡೆದುಕೊಳ್ಳುತ್ತಿದೆ. ಅಂದರೆ ನೌಕರರಿಗೆ ಅನ್ಯಾಯವಾದಾಗ ಸರಿಪಡಿಸಬೇಕಾದರ ಜವಾಬ್ದಾರಿ ಸ್ಥಾನದಲ್ಲರುವ ಸರ್ಕಾರವೇ ಅವರನ್ನು ಕೀಳಾಗಿ ನಡೆಸಿಕೊಳ್ಳುತ್ತಿದೆ. ಜತೆಗೆ ಎಲ್ಲವನ್ನು ಸರಿಪಡಿಸುವ ಬದಲಿಗೆ ಇನ್ನಷ್ಟು ಸಮಸ್ಯೆಯನ್ನು ಸೃಷ್ಟಿಸಿ ನೌಕರರನ್ನು ಆ ಸಮಸ್ಯೆಯ ಕೂಪಕ್ಕೆ ದೂಡುತ್ತಿದೆ ಎಂದು ನೌಕರರ ಪರ ಸಂಘಟನೆಗಳ ಮುಖಂಡರು ಕಿಡಿಕಾರುತ್ತಿದ್ದಾರೆ.
ಇಂದು ಬಿಎಂಟಿಸಿ ಅಧಿಕಾರಿಗಳ ಸಭೆ: ಇನ್ನು ಇದೆಲ್ಲದರ ನಡುವೆಯೂ ಇಂದು (ಜ.5) ವಜಾಗೊಂಡ ನೌಕರರನ್ನು ವಾಪಸ್ ತೆಗೆದುಕೊಳ್ಳುವ ಸಂಬಂಧ ಬಿಎಂಟಿಸಿ ಅಧಿಕಾರಿಗಳು ಸಭೆ ನಡೆಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇಂದು ನಡೆಯುವ ಈ ಸಭೆಯಲ್ಲಿ ವಜಾಗೊಂಡಿರುವ ನೌಕರರನ್ನು ಮೊನ್ನೆ ಸಚಿವರು ಹೇಳಿದಂತೆ ಯಾವುದೇ ಷರತ್ತು ಇಲ್ಲದೆ ವಾಪಸ್ ತೆಗೆದುಕೊಳ್ಳುವ ತೀರ್ಮಾನ ತೆಗೆದುಕೊಳ್ಳುತ್ತಾರೋ ಇಲ್ಲ ಷರತ್ತು ವಿಧಿಸಿಯೇ ತೆಗೆದುಕೊಳ್ಳಬೇಕು ಎಂದು ನಿರ್ಧರಿಸುತ್ತಾರೋ ಎಂಬುದರ ಬಗ್ಗೆ ತಿಳಿದುಕೊಳ್ಳಲು ನಾಳೆವರೆಗೂ ಕಾದು ನೋಡಬೇಕಿದೆ.
ಈ ನಡುವೆ ವೇತನ ಹೆಚ್ಚಳ ಮಾಡುವ ಸಂಬಂಧವು ಭಾರಿ ಚರ್ಚೆ ನಡೆಯುವ ಎಲ್ಲ ಸಾಧ್ಯತೆಗಳು ಇದ್ದು ಈ ತಿಂಗಳ ಕೊನೆಯಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಸಿಹಿ ಸುದ್ದಿಕೊಡಲಿದೆ ಸರ್ಕಾರ ಎಂದು ಹೇಳಲಾಗುತ್ತಿದೆ. ಆದರೆ ಸರ್ಕಾರದಿಂದ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.
[wp-rss-aggregator limit=”3″]