ಬೆಂಗಳೂರು: ಸೇವೆಯೇ ಮುಖ್ಯ ಧ್ಯೆಯವಾಗಿರುವ ಸಾರಿಗೆ ನಿಗಮಗಳನ್ನು ಒಂದು ಉದ್ಯಮದ ರೀತಿ ನೋಡುತ್ತಿರುವ ಸರ್ಕಾರ ಯಾವಾಗಲು ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎಂದು ಹೇಳುವುದು ನಿಗಮದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಜನರಿಗೂ ಒಂದು ರೀತಿಯ ಕಿರಿಕಿಯಂತಾಗುತ್ತಿದೆ.
ಈ ನಡುವೆ ನಷ್ಟದಲ್ಲಿವೇ ಎಂದು ಹೇಳಿ ಸಾರಿಗೆ ನಿಗಮಗಳಿಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಿದೆ ಎನ್ನುವ ಮೂಲಕ ಕೆಲ ಮಾಧ್ಯಮಗಳು ಕೂಡ ಸಾರಿಗೆ ಸೇವೆಯನ್ನು ಉದ್ಯಮದಂತೆಯೇ ಬಿಂಬಿಸಲು ಹೊರಟಿರುವುದು ದುರಂತವೆ ಸರಿ.
ಇಲ್ಲಿ ಶಿಕ್ಷಣ, ಆರೋಗ್ಯ, ಪೊಲೀಸ್, ನ್ಯಾಯಾಲಯಗಳು ಹೀಗೆ ಹೇಳುತ್ತ ಹೋದರೆ ಹತ್ತಾರು ಸೇವೆಗಳನ್ನು ನೀಡುತ್ತಿರುವ ಇಲಾಖೆಗಳಿಗೆ ಸರ್ಕಾರ ತನ್ನ ಖಜಾನೆಯಿಂದ ಹಣ ಕೊಡುತ್ತಿದ್ದರೂ ಈ ಯಾವ ಇಲಾಖೆಗಳನ್ನು ನಷ್ಟದಲ್ಲಿವೆ ಎಂದು ಹೇಳುವುದೇ ಇಲ್ಲ. ಆದರೆ, ಪ್ರಮುಖವಾಗಿ ಜನರಿಗೆ ಬೇಕಿರುವ ರಸ್ತೆ ಸಾರಿಗೆ ಸೇವೆಯಲ್ಲಿ ಮಾತ್ರ ಸರ್ಕಾರ ಲಾಭ ನಷ್ಟವನ್ನು ಲೆಕ್ಕಹಾಕುತ್ತಿದೆ. ಇದಕ್ಕೆ ಏನೆಂದು ಹೇಳಬೇಕೋ ಗೊತ್ತಾಗುತ್ತಿಲ್ಲ.
ಇನ್ನು ಇದೇ ಸಿದ್ದರಾಮಯ್ಯ ಅವರು ಇಂದಿನ ವಿಪಕ್ಷ ನಾಯಕ ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ನಮ್ಮ ನಿಗಮಗಳು ನಷ್ಟದಲ್ಲವೆ ಎಂದು ಹೇಳಿದ್ದಕ್ಕೆ ಮೈಸೂರಿನ ಇಲವಾದಲ್ಲಿ ಬಸ್ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಒಂದು ರೀತಿ ತಿರುಗೇಟು ಕೊಡುವಂತೆ ಸಾರಿಗೆ ನಿಗಮಗಳು ಇರುವುದು ನಾಡಿನ ಜನರ ಸೇವೆಗಾಗಿ. ಹೀಗಾಗಿ ಈ ನಿಗಮಗಳಲ್ಲಿ ಲಾಭ ನಷ್ಟ ಲೆಕ್ಕಹಾಕುವ ಬದಲಿಗೆ ನಿಗಮಗಳಿಗೆ ಬೇಕಿರುವ ಆರ್ಥಿಕ ಸಂಪನ್ಮೂಲವನ್ನು ಸರ್ಕಾರವೇ ಭರಿಸಬೇಕು ಎಂದು ಹೇಳಿದ್ದರು.
ಆದರೆ, ಸಿದ್ದರಾಮಯ್ಯ ಅವರು ಕೂಡ ಈಗ ಸಾರಿಗೆ ನಿಗಮಗಳನ್ನು ಲಾಭ ನಷ್ಟದ ದೃಷ್ಟಿಯಿಂದಲೇ ನೋಡುತ್ತಿರುವುದು ಬೇಸರದ ಸಂಗತಿ. ಕಾರಣ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳು ಸರ್ಕಾರದ ಅಧೀನದಲ್ಲಿ ಬರುತ್ತಿದ್ದು, ಇವುಗಳನ್ನು ನಾಡಿನ ಜನರ ಸೇವೆಗಾಗಿ ಮಾಡಿರುವುದು. ಆದರೂ ಲಾಭ ನಷ್ಟ ಎಂದು ಏಕೆ ಬಿಂಬಿಸುತ್ತಿದ್ದಾರೋ ಗೊತ್ತಿಲ್ಲ.
ಇನ್ನಾದರೂ ಸಾರಿಗೆ ನಿಗಮಗಳಲ್ಲಿ ಲಾಭ ನಷ್ಟ ಲೆಕ್ಕಹಾಕುವ ಬದಲಿಗೆ ಕಟ್ಟುನಿಟ್ಟಿನ ಆಡಳಿತ ನಡೆಸುವ ಮೂಲಕ ಸಾರಿಗೆ ನಿಗಮಗಳಲ್ಲಿ ಬರುವ ಆರ್ಥಿಕ ಸಂಪನ್ಮೂಲವನ್ನು ಕ್ರೂಢೀಕರಿಸಿ ಕಡಿಮೆ ಆಗಿದ್ದರೆ ಸರ್ಕಾರದ ಖಜಾನೆಯಿಂದ ಹಣವನ್ನು ಕೊಡುವ ಮೂಲಕ ಕಾಲ ಕಾಲಕ್ಕೆ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ ವೇತನ ಸೇರಿದಂತೆ ಇತರ ಖರ್ಚನ್ನು ಪಾವತಿಸುವ ಜವಾಬ್ದಾರಿಯನ್ನು ಸರ್ಕಾರ ಪಾಲನೆ ಮಾಡಬೇಕು.
ಈ ನಿಟ್ಟಿನಲ್ಲಿ ಮಾಧ್ಯಮಗಳ ಕೂಡ ಬೆಳಕು ಚೆಲ್ಲಬೇಕು. ಅದನ್ನು ಬಿಟ್ಟು ಈ ರೀತಿ ಲಾಭ ನಷ್ಟದ ದೃಷ್ಟಿಯಿಂದ ನೋಡುವುದು ನಿಗಮಗಳು ನಷ್ಟದಲ್ಲಿವೆ ಎಂದು ಬಿಂಬಿಸುವುದು ಸರಿಯಲ್ಲ. ಒಂದು ವೇಳೆ ಸಾರ್ವಜನಿಕರಿಗೆ ಬೇಕಿರುವ ಈ ಪ್ರಮುಖ ಸೇವೆಯನ್ನು ಉದ್ಯಮದ ರೀತಿ ನೋಡಿದರೆ ಶಿಕ್ಷಣ, ಆರೋಗ್ಯ, ನ್ಯಾಯಾಲಯಗಳು, ಪೊಲೀಸ್ ಇಲಾಖೆಗಳು ಸೇರಿದಂತೆ ಸೇವೆಯೇ ಪ್ರಮುಖವಾಗಿರುವ ಇಂಥ ಇಲಾಖೆಗಳಲ್ಲಿ ಎಷ್ಟು ಲಾಭ ಪಡೆಯುತ್ತಿದ್ದೀರಿ ಎಂದು ಪ್ರಶ್ನಿಸಬೇಕಾಗುತ್ತದೆ ಎನ್ನುತ್ತಿದ್ದಾರೆ ಪ್ರಜ್ಞಾವಂತರು.
ಹೀಗಾಗಿ ಇನ್ನಾದರೂ ಸಾರಿಗೆ ನಿಗಮಗಳಲ್ಲಿ ಲಾಭ ನಷ್ಟ ನೋಡುವ ಬದಲಿಗೆ ಸೇವೆಯನ್ನೇ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ ಹೀಗಾಗಿ ಸಿಎಂ ಸಿದ್ದರಾಮಯ್ಯ ಇದನ್ನು ಯಾವ ರೀತಿ ಪರಿಗಣಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.