NEWSನಮ್ಮರಾಜ್ಯಸಂಸ್ಕೃತಿ

ಸಾಹಿತ್ಯದ ಮೂಲಕ ಸಮಾಜ ಒಂದುಗೂಡಿಸಬೇಕು: ಸಾಹಿತಿ ಡಾ.ಡಿ.ಕೆ. ರಾಜೇಂದ್ರ

ವಿಜಯಪಥ ಸಮಗ್ರ ಸುದ್ದಿ

ಮೈಸೂರು : ಸಾಹಿತ್ಯಕ್ಕೂ ಸಮಾಜಕ್ಕೂ ಅಪಾರವಾದ ನಂಟಿದೆ. ಅದಕ್ಕೆ ಸಾಹಿತಿ ಸಮಾಜದ ಶಿಶು. ಈ ಹಿನ್ನೆಲೆಯಲ್ಲಿ ಸಮಾಜದ ಜೊತೆಗೆ ಸಾಹಿತ್ಯವೂ ಬದಲಾಗುತ್ತದೆ. ಇದನ್ನು ಯುವಕವಿಗಳು ಗ್ರಹಿಸಿ ಸಾಹಿತ್ಯದ ಮೂಲಕ ಸಮಾಜವನ್ನೂ ಜಗತ್ತನ್ನೂ ಒಂದುಗೂಡಿಸುವ ಕೆಲಸ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಕ್ಷ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಹಾಗೂ ಹಿರಿಯ ಸಾಹಿತಿ ಡಾ.ಡಿ.ಕೆ. ರಾಜೇಂದ್ರ ಕರೆ ನೀಡಿದರು.

ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ತು ಸಂಯುಕ್ತ ಆಯೋಜಿಸಿದ್ದ ‘ದಸರಾ ಯುವ ಕವಿಗೋಷ್ಠಿ’ ಉದ್ಘಾಟಿಸಿ ಮಾತನಾಡಿದ ಅವರು, ಯುದ್ಧದ ಕಾರ್ಮೋಡಗಳು ಕವಿದಿರುವ ಆತಂಕದ ಸಂದರ್ಭದಲ್ಲಿ ಸಮಾಜವನ್ನು ಒಂದುಗೂಡಿಸುವ ಕಾವ್ಯ ಸೃಷ್ಟಿಸುವುದು ಕವಿಗಳ ಕರ್ತವ್ಯ ಎಂದರು.

ಸಾಹಿತ್ಯ ರಚಿಸುವ ಕವಿ ಸಮಾಜದ ಕಣ್ಣು. ಅಂತೆಯೇ ಸಾಹಿತ್ಯ ಮತ್ತು ಸಮಾಜಕ್ಕೂ ನಿಕಟ ಸಂಬಂಧವಿದೆ. ಆದ್ದರಿಂದ, ಕವಿ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ ಬರೆದರೆ ಆಗದು. ಕಣ್ಣಿದ್ದು ಕರುಡರಾದರೆ, ಮನಸ್ಸಿದ್ದು ಬಂಜೆಯಾದರೆ ಭಾವತೀವ್ರತೆಯ ಕಾವ್ಯ ಹುಟ್ಟಲಾರದು ಎಂದು ಪ್ರತಿಪಾದಿಸಿದರು.

ಯುವ ಕವಿಗಳು ಬದುಕಿನ ಆಳಕ್ಕೆ ಇಳಿದು, ವಿಶಾಲ ದೃಷ್ಟಿಕೋನದಿಂದ ನೋಡಿ, ಅಲ್ಲಿನ ವೈವಿಧ್ಯಮಯ ಅನುಭವಗಳನ್ನು ಗ್ರಹಿಸಿ ಬರೆದಾಗ ಶಕ್ತಿಯುತ ಕಾವ್ಯ ಹುಟ್ಟಿಕೊಳ್ಳುತ್ತದೆ. ಹಿರಿಯರ ಸಾಹಿತ್ಯ ಓದುವ ಪ್ರವೃತ್ತಿ ಬೆಳೆಸಿಕೊಂಡು ಮನುಷ್ಯತ್ವದ ಜೊತೆಗೆ ಭಾವನೆಗಳು ಮತ್ತು ಅನುಭವಗಳನ್ನು ಸಾಹಿತ್ಯದಲ್ಲಿ ಹದವಾಗಿ ಬೆರೆಸಿ ಬರೆಯಬೇಕೆಂದರು.

ಸಾಹಿತ್ಯ ಉಳಿಯುವುದು ಬೆನ್ನು ತಟ್ಟುವ ಕಾರ್ಯದಿಂದಲೇ. ಕಾವ್ಯಕ್ಕೆ, ಕವಿಗಳಿಗೆ ಹಿಂದೆ ರಾಜಾಶ್ರಯವಿತ್ತು. ಇಂದು ಸಾಹಿತ್ಯ ಜನಾಶ್ರಯದಿಂದಲೇ ಬೆಳೆಯಬೇಕಿದೆ. ಆದ್ದರಿಂದ ದಸರಾ ಕವಿಗೋಷ್ಠಿಯ ಮೂಲಕ ಜಿಲ್ಲಾ ಕಸಾಪ ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ತು ಯುವ ಕವಿಗಳನ್ನು ಪ್ರೊತ್ಸಾಹಿಸಿ ಬೆಳೆಸುತ್ತಿರುವುದು ಅಭಿನಂದನಾರ್ಹ‌ ಎಂದು ಶ್ಲಾಘಿಸಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಷಹಸೀನಾ ಬೇಗಂ ಮಾತನಾಡಿ, ಜಗತ್ತಿನೆಲ್ಲಡೆ ಯುದ್ಧ ಸಂಸ್ಕೃತಿ ಬೆಳೆಯುತ್ತಿದೆ. ಹಿಂಸೆ ತಾಂಡವವಾಡುತ್ತಿದೆ. ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಇಂತಹ ಹೊತ್ತಿನಲ್ಲಿ ಕವಿಗಳು ಲೋಕದ ವಿದ್ಯಮಾನಗಳಿಗೆ ಸ್ಪಂದಿಸಿ ಬರೆದು ಶಾಂತಿ ಮತ್ತು ಸಾಮರಸ್ಯ ಕಾಪಾಡಬೇಕು ಎಂದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಕ್ಷ ಪದವಿ‌ಕಾಲೇಜಿನ ಅಧ್ಯಕ್ಷ ಪಿ. ಜಯಚಂದ್ರರಾಜು, ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎಚ್.ಕೆ. ರಾಮು, ಮೈಸೂರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಎಚ್.ಎ. ಸುಮತಿ, ಯುವ ಸಾಹಿತಿ ಟಿ. ಲೋಕೇಶ್ ಹುಣಸೂರು, ರಂಗಕರ್ಮಿ ಚಂದ್ರು ಮಂಡ್ಯ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಸರಾ ಯುವ ಕವಿಗೋಷ್ಠಿಯಲ್ಲಿ ಡಾ.ಬಿ.ಎಸ್. ದಿನಮಣಿ, ಡಾ. ಚಂದ್ರಗುಪ್ತ, ಡಾ.ಟಿ.ಎನ್. ನಂದ, ನಿಂಗಪ್ಪ ಮಂಟೇಧರ, ಹರ್ಷಿತಾ ಮಾಂಬಳ್ಳಿ, ಡಾ.ಟಿ.ಎಂ. ಪವಿತ, ಟಿ. ಸುಮ‌ ಕೊತ್ತತ್ತಿ, ಎಸ್. ರವಿಕುಮಾರ್, ಡಾ. ಬಿ. ರಮ್ಯ, ಮಂಜೇಶ್ ದೇವಗಳ್ಳಿ ಕೆ.ಬಿ. ಪ್ರಮೋದ್, ಮಹಾಂತಪ್ಪ ಡಿ.ಎ. ರೇಷ್ಮ, ಎನ್. ಲಾವಣ್ಣ, ಬಿ.ಎಂ. ರಜನಿ ಮೊದಲಾದ ೪೫ ಮಂದಿ ಯುವ ಕವಿಗಳು ಕಿಕ್ಕಿರಿದು ತುಂಬಿದ್ದ ಭವನದಲ್ಲಿ ವರ್ತಮಾನದ ಹಲವು ತಲ್ಲಣಗಳಿಗೆ ದನಿಯಾಗುವ ತಮ್ಮ ಕವನಗಳ ವಾಚಿಸಿ ಗಮನಸೆಳೆದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು