CrimeNEWSದೇಶ-ವಿದೇಶನಮ್ಮಜಿಲ್ಲೆ

ಅಪ್ಪನ ಶವ ಬಿಸಾಕಿ ಎಂದ ಮಕ್ಕಳು: ಅನಾಥ ಶವವಾದ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ – ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸರು

ವಿಜಯಪಥ ಸಮಗ್ರ ಸುದ್ದಿ

ಚಿಕ್ಕೋಡಿ: ಮಕ್ಕಳು ವಿದೇಶಗಳಲ್ಲಿ ಕೆಲಸದಲ್ಲಿದ್ದಾರೆ. ನಿವೃತ್ತನಾದ ಅಪ್ಪ ಚಿಕ್ಕೋಡಿಯಲ್ಲೇ ನೆಲೆಸಿದ್ದಾರೆ. ಆದರೆ, ಕೊನೆಗಾಲದಲ್ಲಿ ಅವರನ್ನು ನೋಡಿಕೊಳ್ಳುವುದಕ್ಕೆ ಯಾರು ಕೂಡ ಇಲ್ಲ. ಅಂದರೆ, ಅಪ್ಪನ ಪಾಲಿಗೆ ಜೀವಂತವಾಗಿ ಇರುವ ಮಕ್ಕಳು ಸತ್ತು ಹೋಗಿದ್ದಾರೆ.

ತನ್ನ ಕಾಲದಲ್ಲಿ ಅಪ್ಪ, ಇದ್ದ ಇಬ್ಬರು ಮಕ್ಕಳನ್ನು ಚೆನ್ನಾಗಿ ಬೆಳೆಸಿ ವಿದ್ಯಾಭ್ಯಾಸವನ್ನು ಕೊಡಿಸಿದ. ತನ್ನ ಮಕ್ಕಳು ಸಿರಿವಂತರಾಗಿ ಬದುಕಬೇಕು ಎಂಬ ಆಸೆಯಂತೆ ಅವರಿಗೆ ಒಳ್ಳೆ ಶಿಕ್ಷಣಕೊಡಿಸಿದ ಸದ್ಯ ಆ ಮಕ್ಕಳು ಈಗ ಅದ್ದೂರಿ ಜೀವನಮಾಡುತ್ತ ವಿದೇಶದಲ್ಲಿ ನೆಲೆಸಿದ್ದಾರೆ. ಆದರೆ ಇತ್ತ ಏಕಾಂಗಿಯಾಗಿದ್ದ 72 ವರ್ಷದ ಅಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರೂ ಅವರನ್ನು ಬಂದು ನೋಡಬೇಕು ಎಂಬ ಮನಸ್ಸನ್ನು ಮಾತ್ರ ಇಬ್ಬರು ಮಕ್ಕಳು ಮಾಡಲಿಲ್ಲ. ಪರಿಣಾಮ ಅನಾರೋಗ್ಯ ಹೆಚ್ಚಾಗಿ ಕೊನೆಯುಸಿರೆಳೆದೆ ಬಿಟ್ಟರು.

ಹೌದು! ನನ್ನ ಮಗಳು ಕೆನಡಾದಲ್ಲಿದ್ದಾಳೆ ಮಗ ಆಫ್ರಿಕಾದಲ್ಲಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಜೀವವದು. ಬಾಳಿನ ಅಂತ್ಯದಲ್ಲಿ ಅನಾಥ ಹೆಣವಾಗಿ ಕೊನೆಗೆ ಪೊಲೀಸರ ಕೈಯಲ್ಲಿ ಅಂತ್ಯಕ್ರಿಯೆ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಿಸಿತು.

ಅನಾಥ ಹೆಣವಾದವರು ಭಿಕ್ಷುಕನಲ್ಲ, ಬಡವನೂ ಅಲ್ಲ, ಆತ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌. ಅವರ ಹೆಸರು ಮೂಲಚಂದ್‌ ಶರ್ಮಾ (72) ಎಂಬುವರೆ ಅನಾಥ ಶವವಾದವರು. ಇತ್ತ ಸತ್ತು ಮಲಗಿದ ಅಪ್ಪನ ಅಂತಿಮ ದರ್ಶನ ಪಡೆಯಬೇಕಾದ ಮಕ್ಕಳು ಕ್ರೌರ್ಯದಿಂದ ವರ್ತಿಸಿದ್ದಾರೆ. ಅವರ ಮಾತುಗಳು ಯಾವ ಮಟ್ಟದಲ್ಲಿತ್ತು ಎಂದರೆ ನಿಮಗೆ ಸಾಧ್ಯವಾದರೆ ಅಂತ್ಯಸಂಸ್ಕಾರ ಮಾಡಿ, ಇಲ್ಲವಾದರೆ ಎಲ್ಲಾದರೂ ಆ ಹೆಣವನ್ನು ಎಸೆದು ಬಿಡಿ ಎಂದು ಕರೆ ಮಾಡಿದ ಪೊಲೀಸರಿಗೇ ಹೇಳಿದ್ದಾರೆ!

ಮೂಲಚಂದ್‌ ಶರ್ಮ ಅವರು ಮೂಲತಃ ಪೂನಾದವರು. ಅವರು ಪಾರ್ಶ್ವವಾಯುವಿಂದ ಬಳಲುತ್ತಿದ್ದರು. ಅವರನ್ನು ಕರೆದುಕೊಂಡು ಒಬ್ಬ ವ್ಯಕ್ತಿ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿರುವ ನಾಗರಮುನ್ನೋಳಿ ಕುಂಬಾರ ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿಸಿಕೊಂಡು ಬಳಿಕ ಅಲ್ಲೇ ಹತ್ತಿರದಲ್ಲಿದ್ದ ಶಿವನೇರಿ ಲಾಡ್ಜ್‌ಗೆ ಬಂದು ಇದ್ದರು.

ಕೆಲವು ದಿನದ ಹಿಂದೆ ಮೂಲಚಂದ್‌ ಶರ್ಮ ಅವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದ ವ್ಯಕ್ತಿ ಲಾಡ್ಜ್‌ನಿಂದ ನಾಪತ್ತೆಯಾಗಿದ್ದ. ಲಾಡ್ಜ್‌ ಮಾಲೀಕರು ಹೋಗಿ ಮೂಲಚಂದ್‌ ಅವರನ್ನು ವಿಚಾರಿಸಿದಾಗ ಭಯಾನಕ ಸತ್ಯಕಥೆಯೊಂದನ್ನು ಅವರು ಹೇಳಿದ್ದಾರೆ! ಅದೇನೆಂದರೆ, ಅವರನ್ನು ಲಾಡ್ಜ್‌ನಲ್ಲಿಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದ ವ್ಯಕ್ತಿ ನನ್ನ ಸಂಬಂಧಿಕನೇನೂ ಅಲ್ಲ. ಆತ ಒಬ್ಬ ಸಂಬಳಕ್ಕೆ ನೇಮಕಗೊಂಡಿದ್ದ ಹೋಮ್‌ ನರ್ಸ್‌.

ಅವನಿಗೆ ಕೊಟ್ಟ ದುಡ್ಡಿನ ಅವಧಿ ಮುಗಿಯಿತು. ಕಾಂಟ್ರಾಕ್ಟ್‌ ಮುಗಿದ ಕೂಡಲೇ ಅವನು ನನ್ನನ್ನು ಲಾಡ್ಜ್‌ನಲ್ಲೇ ಬಿಟ್ಟು ಹೋಗಿದ್ದಾನೆ ಎಂದು ಹೇಳಿದ್ದಾರೆ. ಮೂಲಚಂದ್‌ ಶರ್ಮಾ ಅವರ ಆರೋಗ್ಯ ತುಂಬ ಹದಗೆಟ್ಟಿದ್ದರಿಂದ ಲಾಡ್ಜ್‌ ಮ್ಯಾನೇಜರ್‌ ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಲಾಡ್ಜ್‌ಗೆ ಬಂದ ಪೊಲೀಸರ ಬಳಿಯೂ ಮೂಲಚಂದ್‌ ಶರ್ಮಾ ತಮ್ಮ ಬದುಕಿನ ಕಥೆ ಹೇಳಿದ್ದಾರೆ.

ʻನಾನು ಬಡವ ಅಲ್ಲ,‌ ನನ್ನ ಮಕ್ಕಳು ವಿದೇಶದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾರೆ. ಮಗಳು ಕೆನಡಾದಲ್ಲಿದ್ದಾಳೆ, ಮಗ ಆಫ್ರಿಕಾದಲ್ಲಿದ್ದಾನೆʼ ಎಂದು ಹೆಮ್ಮೆಯಿಂದಲೇ ಹೇಳಿದ್ದಾರೆ. ಸರಿ ನಿಮ್ಮ ಆರೋಗ್ಯ ತುಂಬ ಹದಗೆಟ್ಟಿದೆ ಚಿಕ್ಕೋಡಿಯ ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗ ಮೂಲಚಂದ್‌ ಅವರು ಯಾವ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಗೆ ಬರಲ್ಲ ಎಂದು ಹಠ ಮಾಡಿದ್ದಾರೆ.

ಸರಿ ಏನು ತಿಳಿಯದಂತಾದ ಪೊಲೀಸರು ನಿಮ್ಮ ಮಕ್ಕಳ ಫೋನ್‌ ನಂಬರ್‌ ಕೊಡಿ ಎಂದು ಮೂಲಚಂದ್‌ ಅವರಿಂದ ಮಕ್ಕಳ ಫೋನ್ ನಂಬರ್ ಪಡೆದು ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಮಗನಾಗಲೀ, ಮಗಳಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಪೊಲೀಸರು ಮೂಲಚಂದ್ರ ಶರ್ಮಾರನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೇ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ನಡುವೆ ಎರಡು ದಿನದ ಹಿಂದೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂಲಚಂದ್ರ ಶರ್ಮಾ ಕೊನೆಯುಸಿರೆಳೆದಿದ್ದಾರೆ. ನಿಧನರಾದ ಬಳಿಕ ಮತ್ತೊಮ್ಮೆ ಮಕ್ಕಳನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದಾರೆ ಪೊಲೀಸರು. ಆಗ ಒಮ್ಮೆ ಸಂಪರ್ಕಕ್ಕೆ ಸಿಕ್ಕಿದ ಮಗಳು ಆಡಿದ ಮಾತು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ʻʻಅವರು ನಮ್ಮ ತಂದೆ ಆವಾಗ ಆಗಿದ್ದರು, ಈಗ ಇಲ್ಲ. ನಾವೇನಾದ್ರೂ ಚಿಕಿತ್ಸೆ ಕೊಡಿಸಿ ಅಂತ ಹೇಳಿದ್ದೇವಾ? ” ಅಂತ್ಯಕ್ರಿಯೆ ಮಾಡೋಕೆ ಆದರೆ ಮಾಡಿ‌ ಇಲ್ಲ ಹೆಣ ಬಿಸಾಕಿ” ಎಂದು ಪೊಲೀಸರಿಗೇ ಆವಾಜ್‌ ಹಾಕಿದ್ದಾಳೆ ಮಗಳು. ಇತ್ತ ಬೇರೆ ದಾರಿ ಕಾಣದೆ ಪೊಲೀಸರು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನಾಗರಮುನ್ನೊಳ್ಳಿ ಗ್ರಾಮದಲ್ಲಿ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಮಕ್ಕಳಿಗೆ ಬೇಡವಾದ ಒಬ್ಬ ಹಿರಿಯ ವ್ಯಕ್ತಿಯ ಮೃತದೇಹವನ್ನು ಜತನದಿಂದ ಅಂತ್ಯಕ್ರಿಯೆ ಮಾಡಿದ ಪೊಲೀಸರ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅದೇರೀತಿ ಮಕ್ಕಳ ವರ್ತನೆಗೆ ಜನ ಕಿಡಿಕಾರಿದ್ದು, ಇಂಥ ಮಕ್ಕಳು ಯಾವ ತಂದೆ ತಾಯಿಗೂ ಬೇಡ ದೇವರೆ ಎಂದು ಮೂಲಚಂದ್‌ ಅವರ ಮಕ್ಕಳ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು