ಬೆಂಗಳೂರು: ಮುಸ್ಲಿಂ ಸಮಯದಾಯದವರನ್ನು ಪಂಕ್ಚರ್ ಹಾಕೋರು ಅಂದ. ಅವನ್ಯಾರೋ ಎಂಪಿ ತುಂಬ ಬುದ್ದಿವಂತ, ಅವನಷ್ಟು ನಾವು ಓದಿಲ್ಲ, ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪರ್ಲ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕೋವಿಡ್ ವಾರಿಯರ್ಸ್‍ಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕೊರೊನಾದಿಂದ ಮೃತಪಟ್ಟ ರಾಜ್ಯದ ಎಲ್ಲ ಧರ್ಮದವರ ಹೆಣ ಹೊತ್ತವರು ಮುಸ್ಲಿಂ ಸಮುದಾಯದವರು. ಈಗ ಮಾತಾಡೋ ಗಂಡುಗಳು ಯಾರಾದರೂ ಹೆಣಗಳಿಗೆ ಕೈ ಕೊಟ್ಟಿದ್ದಾರಾ? ಸುರೇಶ್ ಅಂಗಡಿಯವರ ಹೆಣವನ್ನು ಅವರ ಕುಟುಂಬಸ್ಥರೂ ನೋಡುವುದಕ್ಕೆ ಆಗಲಿಲ್ಲ. ಇದೇನಾ ದೇಶದ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ.
ಇನ್ನು ಪಂಕ್ಚರ್ ಇವರು ಹಾಕ್ತಾರಾ? ಬೌರಿಂಗ್ ಹಾಸ್ಪಿಟಲ್ ಜಾತಿ ಧರ್ಮದ ಆಧಾರದ ಮೇಲಿದೆಯಾ? ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತರು. 36 ಜನ ಕುಟುಂಬಸ್ಥರ ನೋವನ್ನು ನಾನು ವಿಡಿಯೋ ಮಾಡಿ ಯೂ ಟ್ಯೂಬ್ ನಲ್ಲಿ ಹಾಕಿಸುತ್ತಿದ್ದೇನೆ. 4 ಲಕ್ಷ ಜನ ಕೋವಿಡ್ ನಿಂದ ಸತ್ತರು ಆದರು ಸರ್ಕಾರ ಗಮನಕೊಡಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಸೋಂಕಿತರು ಬೆಡ್ ಸಿಗದೆ, ಓಡಾಡಿದರು. ಈ ವೇಳೆ ನೂರಾರು ಜನ ತಮ್ಮ ಅಮೂಲ್ಯವಾದ ಜೀವ ಕಳೆದುಕೊಂಡರು. ಆದರೆ ಬಿಜೆಪಿ ಸರ್ಕಾರ ಪರಿಹಾರ ಕೊಡಬೇಕಾಗುತ್ತದೆ ಎಂದು ಆ ಲೆಕ್ಕವನ್ನೇ ತೆಗೆದುಬಿಟ್ಟಿದೆ. ಅಧಿವೇಶ ಆರಂಭವಾದಾಗ ನಾವು ಈ ವಿಚಾರ ಎತ್ತಿ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.
ಸರ್ಕಾರ ಒಬ್ಬರಿಗೂ ನೆರವಾಗಲಿಲ್ಲ. ನನ್ನ ವಿರುದ್ದ ಬೇಕಾದಷ್ಟು ಟೀಕೆ ಟಿಪ್ಪಣಿ ಮಾಡುತ್ತಾರೆ. ನಾನು ಮುಸ್ಲಿಂರನ್ನು ಓಲೈಕೆ ಮಾಡುತ್ತೇನೆ. ಹಾಗೇ ಹೀಗೆ ಅಂತ ಬೇಕಾದಷ್ಟು ಮಾತಾಡಿಬಿಟ್ಟರು. ಹೌದು, ನಾನು ಒಪ್ಪಿಕೊಳ್ಳುತ್ತೇನೆ ಮುಸ್ಲಿಮರೆಲ್ಲ ನನ್ನ ಸಹೋದರರು. ಇನ್ನು ಸರ್ಕಾರ ಕೋವಿಡ್ ನಿಂದ ಸತ್ತವರಿಗೆ ಯಾರಿಗೂ ಸಹಾಯ ಮಾಡಿಲ್ಲ. ವ್ಯಾಪಾರಿಗಳಿಗೆ ಯಾವೊಂದು ಟ್ಯಾಕ್ಸ್ ಕಡಿಮೆ ಮಾಡಲಿಲ್ಲ. ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೂರ್ಣ ಪ್ರಮಾಣದಲ್ಲಿ ಪಕ್ಷದ ಕೆಲಸಕ್ಕೆ ಬಳಸಿಕೊಳ್ಳುತ್ತೇವೆ: ಮಾಜಿ ಸಚಿವ ವಿನಯ್ ಕುಲಕರ್ಣಿ ನಮ್ಮ ಹಿರಿಯ ನಾಯಕರು, ಮಂತ್ರಿ ಆಗಿದ್ದವರು. ಜಮೀರ್ ಹಾಗೂ ವಿನಯ್ ಕುಲಕರ್ಣಿ ಪರ ನಮ್ಮ ಪಕ್ಷ ಇದೆ. ಕುಲಕರ್ಣಿಯನ್ನು ಪೂರ್ಣ ಪ್ರಮಾಣದಲ್ಲಿ ಪಕ್ಷದ ಕೆಲಸಕ್ಕೆ ಬಳಸಿಕೊಳ್ಳುತ್ತೇವೆ. ಅದರಲ್ಲಿ ಅನುಮಾನವೇ ಬೇಡ ಎಂದು ತಿಳಿಸಿದರು.
ಇನ್ನು ವಿನಯ್ ಕುಲಕರ್ಣಿ ವಿರುದ್ದ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಪ್ರಕರಣದ ದಾಖಲಿಸಿದ್ದಾರೆ. ಬಹಳ ಸಂತೋಷ, ಆದರೆ ಇವರ ಕೇಂದ್ರ ಮಂತ್ರಿಗಳು ಎಲ್ಲ ನಿಯಮ ಪಾಲನೆ ಮಾಡಿದ್ದಾರಾ? ಕೇಂದ್ರ ಸಚಿವರಿಗೆ ಒಂದು ಕಾನೂನು? ಇವರಿಗೊಂದು ಕಾನೂನಾ ಎಂದು ರಾಜ್ಯ ಸರ್ಕಾರದ ನಡೆಯ ಬಗ್ಗೆ ಕಿಡಿಕಾರಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)