ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾಗಿಯಾಗಿರುವ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಉನ್ನತ ಮಟ್ಟದ ಸಮಿತಿಯ ಮೂಲಕ ತನಿಖೆ ನಡೆಸಬೇಕು ಎಂದು ಮಾಜಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇದು ಬಿಜೆಪಿಯವರ “ಡರ್ಟಿ ಗೇಮ್”. ಕೇಂದ್ರ ಸರ್ಕಾರವೇ ನಡೆಸಿರುವ ಈ ಕಾನೂನು ಬಾಹಿರ ಕೃತ್ಯವನ್ನು ಮೇಲ್ಮನೆಯ ಎರಡೂ ಸದನಗಳಲ್ಲಿ ಪ್ರಸ್ತಾಪಿಸಬೇಕು ಎಂದು ಅಧೀರ್ ರಂಜನ್ ಚೌಧರಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕೋರುತ್ತೇನೆ ಎಂದು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಕಾಲದಲ್ಲಿ ನನ್ನ ಆಪ್ತಸಹಾಯಕನ ಪೋನ್ ಕರೆಗಳನ್ನು ಕೇಂದ್ರ ಸರ್ಕಾರ ಟ್ಯಾಪ್ ಮಾಡಿದೆ ಎನ್ನುವುದು ಅಚ್ಚರಿಯ ಸುದ್ದಿ ಅಲ್ಲ. ಕೇಂದ್ರ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಹೇಸದವರು ಎನ್ನುವುದು ನಮಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ಆಮಿಷ, ಬೆದರಿಕೆ ಮತ್ತು ಸುಳ್ಳುಗಳೇ ಆಪರೇಷನ್ ಕಮಲ ಎಂಬ ಪಾತಕದ ಅಸ್ತ್ರಗಳು. ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬರಲು ರಾಜ್ಯ ಬಿಜೆಪಿ ಮಾಡಿದ ಕುಕೃತ್ಯಗಳು ಒಂದೊಂದಾಗಿ ಬಯಲಾಗುತ್ತಿದೆ, ಬಿಜೆಪಿ ನಾಯಕರು ಜನರ ಮುಂದೆ ಬೆತ್ತಲಾಗುತ್ತಿದ್ದಾರೆ ಎಂದಿದ್ದಾರೆ.
ಪೋನ್ ಕದ್ದಾಲಿಕೆ ಬಗ್ಗೆ ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡಿರುವ ಕೇಂದ್ರ ಬಿಜೆಪಿ ನಾಯಕರಿಗೆ ಇರುವ ಭಯ ನನಗಿಲ್ಲ. ನುಡಿದಂತೆ ನಡೆಯುವ ಸತ್ಯದ ಹಾದಿ ನನ್ನದು. ಆದರೆ ಪ್ರಜೆಗಳ ಖಾಸಗಿ ಬದುಕಿನೊಳಗೆ ಇಣುಕಿ ನೋಡುವ ಚಟ ಸಂವಿಧಾನ ವಿರೋಧಿ ಮಾತ್ರ ಅಲ್ಲ, ಸಭ್ಯತೆಯ ಸಂಸ್ಕೃತಿಯೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಅಮಾಯಕ ಪ್ರಜೆಗಳ ಪೋನ್ ಕದ್ದಾಲಿಕೆ ಮಾಡಿ ಕುಖ್ಯಾತಿ ಪಡೆದವರು. ಹುಟ್ಟುಗುಣ ಸುಲಭದಲ್ಲಿ ಬಿಟ್ಟುಹೋಗುವುದಿಲ್ಲ ಎಂದು ಚೇಡಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)