NEWSಆರೋಗ್ಯನಮ್ಮರಾಜ್ಯಲೇಖನಗಳು

ಆಸ್ಪತ್ರೆಯಲ್ಲಿ ನೀಡೋ ಆಹಾರ ರೋಗಿಗಳೇಕೆ ಸೇವಿಸಬೇಕು? ಅದರ ಪ್ರಯೋಜನವೇನು?

ವಿಜಯಪಥ ಸಮಗ್ರ ಸುದ್ದಿ

ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರು ಅಲ್ಲಿ ನೀಡಲಾಗುವ ಆಹಾರದ ಬಗ್ಗೆ ಮೂಗು ಮುರಿಯುತ್ತಾರೆ. ಅಯ್ಯೋ ಬಾಯಿಗೆ ಸೇರಲ್ಲ, ಗಂಟಲಲ್ಲಿ ಇಳಿಯಲ್ಲ ಎಂಬಿತ್ಯಾದಿ ಮಾತುಗಳನ್ನಾಡುತ್ತಾರೆ. ಕೆಲವರಂತು ಆಸ್ಪತ್ರೆಗಳಲ್ಲಿ ನೀಡುವ ಆಹಾರವನ್ನು ಸೇವಿಸದೆ ಹೊರಗಿನಿಂದ ತಂದು ಸೇವಿಸುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳು ಈ ರೀತಿಯಾಗಿ ಮಾಡುವುದು ಒಳ್ಳೆಯದಲ್ಲ.

ಕೇವಲ ನಾಲಿಗೆ ರುಚಿಗಾಗಿ ಸೇವಿಸುವ ಆಹಾರಗಳು ಆರೋಗ್ಯದ ದೃಷ್ಟಿಯಿಂದ ಮಾರಕವಾಗಿರುವುದರಿಂದ ರುಚಿಯಾಗಿದೆ ಎಂಬ ಒಂದೇ ಕಾರಣಕ್ಕೆ ಆಹಾರ ಸೇವಿಸುವುದು ತಪ್ಪಾಗುತ್ತದೆ. ಇಷ್ಟಕ್ಕೂ ನಾವು ಆಸ್ಪತ್ರೆಯಲ್ಲಿದ್ದಾಗ ಆಸ್ಪತ್ರೆ ವತಿಯಿಂದ ನೀಡುವ ಆಹಾರವನ್ನೇ ಏಕೆ ಸೇವಿಸಬೇಕು ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರವೂ ಅವರ ಬಳಿಯಿದೆ. ಜತೆಗೆ ರೋಗಿ ಯಾವ ಕಾಯಿಲೆಯಿಂದ ಬಳಲುತ್ತಿದ್ದಾನೆ? ಆತನಿಗೆ ಯಾವ ರೀತಿಯ ಆಹಾರ ನೀಡಬೇಕು? ಅದು ಯಾವ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ? ಹೀಗೆ ಎಲ್ಲವನ್ನು ಅರಿತು ಆಹಾರನ್ನು ತಯಾರಿಸಿರುತ್ತಾರೆ. ಹೀಗಾಗಿ ಅಂತಹ ಆಹಾರಗಳನ್ನು ಸೇವಿಸುವುದು ಒಳ್ಳೆಯದು.

ಇನ್ನು ಆಸ್ಪತ್ರೆಯಲ್ಲಿ ನೀಡಲಾಗುವ ಆಹಾರವನ್ನು ಏಕೆ ಸೇವಿಸಬೇಕು ಎಂಬುದಕ್ಕೂ ಕಾರಣಗಳನ್ನು ನೀಡಲಾಗುತ್ತಿದೆ. ಅದು ಏನೆಂದರೆ? ಆಸ್ಪತ್ರೆಗಳಲ್ಲೇ ತಯಾರಾಗುವ ಆಹಾರ ಶುದ್ಧ ಮತ್ತು ಶುಚಿಯಾಗಿರುತ್ತದೆ. ಗುಣಮಟ್ಟವೂ ಉತ್ತಮವಾಗಿರುತ್ತದೆ. ಜತೆಗೆ ಪೋಷಕಾಂಶವೂ ಅಧಿಕವಾಗಿರುತ್ತದೆ. ಒಂದು ವೇಳೆ ಹೊರಗಿನಿಂದ ತಂದಿದ್ದೇ ಆದರೆ ಅದು ರುಚಿಯಾಗಿದ್ದರೂ ಶುದ್ಧವಾಗಿದೆ ಎಂಬುದರ ಖಾತ್ರಿಯಿರುವುದಿಲ್ಲ. ಜತೆಗೆ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.

ಇನ್ನು ಔಷಧ ಚಿಕಿತ್ಸೆಯಾಗಲೀ, ಶಸ್ತ್ರ ಚಿಕಿತ್ಸೆಯಾಗಲೀ, ಘನ ಆಹಾರವಾಗಲೀ, ದ್ರವ ಆಹಾರವಾಗಲೀ, ಟ್ಯೂಬ್‌ನಿಂದ ನೀಡುವ ಆಹಾರವಾಗಲೀ ಈ ಎಲ್ಲ ಆಹಾರಗಳು ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ಜತೆಗೆ ಈ ನಿಶ್ಚಿತ ಆಹಾರಗಳು ರೋಗಿಗಳ ಆರೋಗ್ಯದ ಭಾಗವೇ ಆಗಿರುವುದರಿಂದ ಅವುಗಳನ್ನೇ ಸೇವಿಸುವುದು ಅಗತ್ಯವಾಗಿರುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಯಾವುದೋ ಕಾಯಿಲೆ ಅಥವಾ ಶಸ್ತ್ರ ಚಿಕಿತ್ಸೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗೆ ವೈದ್ಯರು ನೀಡುವ ಸಲಹೆ ಮೇರೆಗೆ ಅವರು ಶಿಫಾರಸ್ಸು ಮಾಡಿರುವ ಆಹಾರವನ್ನೇ ನೀಡಬೇಕಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ರೋಗಿಯನ್ನು ನೋಡಲು ಬರುವ ಸಂಬಂಧಿಗಳು ತಮ್ಮ ಮನೆಯಿಂದಲೇ ಆಹಾರಗಳನ್ನು ತರುತ್ತಾರೆ. ಈ ಆಹಾರಗಳನ್ನು ನೀಡುವ ಮುನ್ನ ವೈದ್ಯರ ಸಲಹೆ ಪಡೆದು ಅವರು ಅನುಮತಿ ನೀಡಿದರೆ ಮಾತ್ರ ಆಹಾರಗಳನ್ನು ನೀಡಬೇಕು.

ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಗಳಿಗೆ ಎಂತಹ ಆಹಾರಗಳನ್ನು ನೀಡಬೇಕು ಎಂಬುದು ವೈದ್ಯರಿಗೆ ಮಾತ್ರ ಗೊತ್ತಿರುತ್ತದೆ ಮತ್ತು ಅದಕ್ಕೆ ತಕ್ಕಂತೆ ಆಹಾರವನ್ನು ಆಸ್ಪತ್ರೆಯಲ್ಲಿ ತಯಾರು ಮಾಡಿರುತ್ತಾರೆ. ಹೀಗಿರುವಾಗ ನಾವು ಮನೆಯಿಂದ ತಂದ ಆಹಾರಗಳನ್ನು ರೋಗಿಗೆ ನೀಡುವುದರಿಂದ ತೊಂದರೆಯಾಗಬಹುದು ಎಂಬುದನ್ನು ತಳ್ಳಿಹಾಕುವಂತಿಲ್ಲ.

ಸರಿಯಾದ ಪೋಷಕಾಂಶಗಳನ್ನು ಹೊಂದಿರುವ ಆಸ್ಪತ್ರೆಯ ಒಳರೋಗಿಗಳ ಆಹಾರವನ್ನು ಸೇವಿಸುವುದರಿಂದ ರೋಗಿಯ ಮಾನಸಿಕ ಮತ್ತು ಶಾರೀರಿಕ ಸ್ಥಿತಿ ಉತ್ತಮಗೊಳ್ಳುವುದಲ್ಲದೆ, ರೋಗವು ಶೀಘ್ರವಾಗಿ ಗುಣಮುಖವಾಗಲು ಅನುಕೂಲವಾಗುತ್ತದೆ. ಆದುದರಿಂದ ಪ್ರತಿಯೊಬ್ಬರೂ ಇದನ್ನು ಮನಗಂಡು ಆಸ್ಪತ್ರೆಯಲ್ಲಿ ನೀಡುವ ಆಹಾರದ ಬಗ್ಗೆ ಮೂಗು ಮುರಿಯದೆ ಅದನ್ನು ಸೇವಿಸುವ ಮೂಲಕ ಆರೋಗ್ಯ ಬಹುಬೇಗ ಚೇತರಿಸಿಕೊಳ್ಳಲು ಅನುವು ಮಾಡಿಕೊಳ್ಳಬೇಕು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು