ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಗುರುವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಯನೂರು ಮಂಜುನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯಿಂದ ಜೆಡಿಎಸ್‌ಗೆ ಜಿಗಿದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಆಯನೂರು ಅಲ್ಲಿ ಕೇವಲ 8863 ಮತ ಪಡೆದು ದೊಡ್ಡ ಸೋಲು ಕಂಡಿದ್ದರು.
ಬಳಿಕ ರಾಜಕೀಯ ಮರುಹುಟ್ಟು ಪಡೆಯಲು ಅವರು ಕಾಂಗ್ರೆಸ್ ಸೇರಲು ಬಯಸಿದ್ದರು. ಆದರೆ, ಸ್ಥಳೀಯ ಕಾಂಗ್ರೆಸಿಗರು ಇವರ ಸೇರ್ಪಡೆ ವಿರೋಧಿಸಿದ್ದರು. ಈ ನಡುವೆಯೂ ಅವರು ಗುರುವಾರ ಕಾಂಗ್ರೆಸ್ ಸೇರಿದ್ದಾರೆ.
ಈ ಹಿಂದೆ ಲೋಕಸಭೆ ಸದಸ್ಯರೂ ಆಗಿದ್ದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಎದುರಾಳಿಯಾಗಿ ಕಣಕ್ಕಿಳಿದು ಸದ್ದು ಮಾಡಿದ್ದರು. ಜತೆಗೆ ಬಂಗಾರಪ್ಪ ಬಿಜೆಪಿ ಸೇರಿದಾಗ ಆಯನೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಚುನಾವಣೆಯಲ್ಲಿ ಸೋತಿದ್ದರು. ಪುನಃ ಬಿಜೆಪಿಗೆ ಸೇರಿ ವಿಧಾನ ಪರಿಷತ್ ಪ್ರವೇಶಿಸಿದ್ದರು. ಜನತಾಪಕ್ಷಕ್ಕೂ ಒಮ್ಮೆ ಹೋಗಿಬಂದಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವೇಳೆ ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಚಂದ್ರಪ್ಪ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಇದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)