ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾಮಪತ್ರದ ವಿರುದ್ಧ ಸಲ್ಲಿಸಿದ್ದ ಆಕ್ಷೇಪಣೆಯನ್ನು ಪರಿಶೀಲನೆ ಮಾಡಿ ಚುನಾವಣಾಧಿಕಾರಿಗಳು ನಾಮಪತ್ರವನ್ನು ಸ್ವೀಕಾರ ಮಾಡಿದ್ದಾರೆ.
ಇನ್ನು ಈ ಬಗ್ಗೆ ನಮ್ಮ ಬಿಜೆಪಿ ಅಭ್ಯರ್ಥಿಯೊಂದಿಗೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಪರ ವಕೀಲ ಎಲ್.ಎನ್ ಹೆಗ್ಗಡೆ ತಿಳಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ಆದಾಯ ತೆರಿಗೆ ವಿಚಾರದಲ್ಲಿ ಸಾಕಷ್ಟು ತಪ್ಪುಗಳಿರುವುದು ಗಮನಕ್ಕೆ ಬಂದಿತ್ತು. ಅಫಿಡವಿಟ್ನಲ್ಲಿ ಕೆಲವೊಂದು ಕಡೆ ನಿಲ್ ಎಂದು ತೋರಿಸಿದ್ದಾರೆ.
ಸರ್ಕಾರಕ್ಕೆ ಕಟ್ಟ ಬೇಕಾದ ತೆರಿಗೆಯನ್ನು ಕಟ್ಟದೆ ಉಳಿಸಿಕೊಂಡಿದ್ದಾರೆ. ಆದರೆ ಚುನಾವಣಾಧಿಕಾರಿಗಳು ಅದನ್ನು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ನಾವು ಅದನ್ನು ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇವೆ. ಈ ಬಗ್ಗೆ ಆಕ್ಷೇಪಣಾ ಅರ್ಜಿಸಲ್ಲಿಸಿದ್ದೆವು ಎಂದು ತಿಳಿಸಿದರು.
ಇನ್ನು ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಚುನಾವಣಾಧಿಕಾರಿಗಳು ಪರಿಶೀಲನೆ ಮಾಡಿ ನಾಮಪತ್ರ ಸ್ವೀಕಾರ ಮಾಡಿದ್ದಾರೆ. ಈ ವಿಚಾರದಲ್ಲಿ ಚುನಾವಣಾಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಬಗ್ಗೆ ನಮ್ಮ ಅಭ್ಯರ್ಥಿಯೊಂದಿಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಇನ್ನು ಇತ್ತ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿದೆ.
ಆದಾಯ ತೆರಿಗೆ ನೋಟಿಸ್ ಹಿನ್ನೆಲೆ ಅವರ ನಾಮಪತ್ರ ತಿರಸ್ಕೃತವಾಗುತ್ತದೆ ಎಂಬ ಭೀತಿಯಿತ್ತು. ಹೀಗಾಗಿ ಅವರ ಸಹೋದ ಡಿ.ಕೆ. ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದರು. ಇದೀಗ ಡಿಕೆಶಿ ನಾಮಪತ್ರ ಸ್ವೀಕೃತವಾಗಿದ್ದು, ದೊಡ್ಡ ತಲೆನೋವು ಕಳೆದಂತಾಗಿದೆ.
ಕೆಪಿಸಿಸಿ ಅಧ್ಯಕ್ಷರ ನಾಮಪತ್ರವನ್ನು ಚುನಾವಣಾಧಿಕಾರಿ ಸಂತೋಷ್ ಶುಕ್ರವಾರ ಪರಿಶೀಲನೆ ನಡೆಸಿದ್ದಾರೆ. ಅಫಿಡವಿಟ್ ಸೇರಿ ಇನ್ನಿತರ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ. ಡಿಕೆಶಿ 4 ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದು, ಎಲ್ಲಾ ನಾಮಪತ್ರಗಳನ್ನೂ ಸ್ವೀಕೃತಗೊಳಿಸಲಾಗಿದೆ.
ಡಿಕೆಶಿಯ ನಾಮಪತ್ರ ಸ್ವೀಕೃತಗೊಂಡ ಹಿನ್ನೆಲೆಯಲ್ಲಿ ಸುರೇಶ್ ನಾಮಪತ್ರ ಹಿಂದಕ್ಕೆ ಪಡೆಯಲಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)