ಬೆಂಗಳೂರು: ಆಫೀಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾದಲ್ಲಿ ಆ ಕಚೇರಿಯನ್ನು 48 ಗಂಟೆಗಳು ಮುಚ್ಚಿ ಸ್ಯಾನಿಟೈಸರ್ ಮತ್ತು ಸೋಂಕು ವಾರದಿಂದ ಸ್ವಚ್ಛಗೊಳಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕಚೇರಿಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದು, ಸೋಂಕಿತ ವ್ಯಕ್ತಿ ಸೀಮಿತ ಸ್ಥಳದಲ್ಲಿ ಮಾತ್ರ ಸಂಚರಿಸಿದ್ದಲ್ಲಿ ಇಡೀ ಕಚೇರಿಯನ್ನು ಬಂದ್ ಮಾಡುವ ಅಗತ್ಯವಿಲ್ಲ. ಆದರೆ ಸೋಂಕು ನಿವಾರಕದಿಂದ ಸಂಪೂರ್ಣವಾಗಿ ಕಚೇರಿಯನ್ನು ಸ್ವಚ್ಛಗೊಳಿಸಬೇಕು.
ವ್ಯಕ್ತಿ ಹಲವು ಮಂದಿಯ ಸಂಪರ್ಕಕ್ಕೆ ಬಂದಿದ್ದಲ್ಲಿ ಸಂಪೂರ್ಣ ಕಚೇರಿಯನ್ನು ಬಂದ್ ಮಾಡಬೇಕಾಗುತ್ತದೆ. ಈ ವೇಳೆ ಉದ್ಯೋಗಿಗಳಿಗೆ ಮನೆಯಲ್ಲಿಯೇ ಕೆಲಸ ಮಾಡಲು ಸೂಚಿಸಬೇಕು. ಇನ್ನು ಗರ್ಭಿಣಿಯರು ಹಾಗೂ ವಯಸ್ಸಾದ ಉದ್ಯೋಗಿಗಳ ಮೇಲೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕೆಂದು ತಿಳಿಸಲಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಉದ್ಯೋಗಿಗಳು ಪರಸ್ಪರ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಸೋಂಕು ಲಕ್ಷಣಗಳು ಗೋಚರಿಸಿ ದ್ದಲ್ಲಿ ಕೂಡಲೇ ಪರೀಕ್ಷೆಗೆ ಸೂಚಿಸಬೇಕು. ಕಚೇರಿಗೆ ಬರುವ ಸಂದರ್ಶಕರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆಗೆ ಒಳಪಡಿಸಬೇಕು. ಸಭೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡುವುದು ಉತ್ತಮ. ಕಂಟೈನ್ಮೆಂಟ್ ವಲಯದ ಉದ್ಯೋಗಿಗಳು ಕಚೇರಿಗೆ ಬರುವುದು ಅಪಾಯ. ಹಾಗಾಗಿ ಅವರಿಗೆ ಮನೆಯಲ್ಲೇ ಕೆಲಸ ಮಾಡಲು ಸೂಚಿಸಬೇಕು. ಸೋಂಕು ಲಕ್ಷಣಗಳು ಇಲ್ಲದ ಉದ್ಯೋಗಿಗಳು ಹಾಗೂ ಸಂದರ್ಶಕರಿಗೆ ಮಾತ್ರ ಕಚೇರಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ
ಮೊದಲು ಈ ಸ್ವಚ್ಛತೆ ಖಚಿತಪಡಿಸಿ
ಕೆಲಸದ ಸ್ಥಳದಲ್ಲಿ ನೆಲ ಮೇಜು ಕುರ್ಚಿ ಕಂಪ್ಯೂಟರ್ ದೂರವಾಣಿ ಸೇರಿದಂತೆ ಬಳಕೆಯ ವಸ್ತುಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು. ಬೇರೆಯವರ ಕುರ್ಚಿ ಕಂಪ್ಯೂಟರ್ಗಳನ್ನು ಬಳಕೆ ಮಾಡಬಾರದು. ಕೆಲಸದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕಚೇರಿಯ ವಿವಿಧೆಡೆ ಸ್ಯಾನಿಟೈಸರ್ ಇಟ್ಟಿರಬೇಕು. ಅನಗತ್ಯವಾಗಿ ಕಚೇರಿಯ ವಿವಿಧೆಡೆ ಓಡಾಡಬಾರದು. ಎಲ್ಲರಿಗೂ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು. ಮೀಟಿಂಗ್ ಮಾಡುವಾಗ ಹತ್ತು ಜನಕ್ಕಿಂತ ಹೆಚ್ಚು ಮಂದಿ ಸೇರಬಾರದು. ಲಿಫ್ಟ್ ನಲ್ಲಿ ಎರಡರಿಂದ ನಾಲ್ಕು ಮಂದಿಗಿಂತ ಹೆಚ್ಚು ಹೋಗಬಾರದು. ಹೀಗಾಗಿ ಮೆಟ್ಟಿಲುಗಳ ಮೂಲಕ ಹತ್ತಿ ಹೋಗುವುದು ಉತ್ತಮ. ಒಟ್ಟಾಗಿ ಕುಳಿತು ಊಟ ತಿಂಡಿಗಳನ್ನು ಮಾಡಬಾರದು ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
![](https://vijayapatha.in/wp-content/uploads/2024/02/QR-Code-VP-1-1-300x62.png)