ಮೈಸೂರು: ಚುನಾವಣೆ ವೇಳೆ ನಡೆಯುವ ಅಕ್ರಮಗಳ ಮಾಹಿತಿ ಪಡೆದು ಅದನ್ನು ತಡೆಯುವ ನಿಟ್ಟಿನಲ್ಲಿ ಮತ್ತು ಎಲೆಕ್ಷನ್ ವೇಳೆ ಕಾರ್ಯಕ್ರಮ ಹಾಗೂ ಇತರ ಅನುಮತಿಗಳಿಗೆ ಅನಗತ್ಯ ಓಡಾಟ ತಪ್ಪಿಸುವ ಸಂಬಂಧ ಚುನಾವಣಾ ಆಯೋಗ ಸುವಿಧಾ ಮತ್ತು ಸಿ-ವಿಜಿಲ್ ತಂತ್ರಂಶವನ್ನು ಅಭಿವೃದ್ಧಿಪಡಿಸಿದ್ದು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಸದುಪಯೋಗ ಪಡೆದು ಕೊಳ್ಳಬಹುದಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಡಿಸಿ ಡಾ.ರಾಜೇಂದ್ರ, ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮೆರವಣಿಗೆ, ಧ್ವನಿವರ್ಧಕ, ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅನುಮತಿಗಾಗಿ ಚುನಾವಣಾ ಆಯೋಗ ರೂಪಿಸಿರುವ “ಸುವಿಧಾ” ತಂತ್ರಾಂಶ ಬಳಸುವಂತೆ ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಕುರಿತ ದೂರುಗಳನ್ನು ಸ್ವೀಕರಿಸಲು 1950 ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ನಿಷ್ಪಕ್ಷಪಾತ, ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ಗುರಿ ಇದೆ. ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡುವುದು ಹಾಗೂ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲಾಡಳತಕ್ಕೆ ಅಗತ್ಯ ಸಹಕಾರ ನೀಡಬೇಕು.
ಅಭ್ಯರ್ಥಿಗಳು ವಾಹನ, ಧ್ವನಿವರ್ಧಕ, ಸಭೆ, ಸಮಾರಂಭ, ರ್ಯಾಲಿ ಸೇರಿದಂತೆ ವಿವಿಧ ಅನುಮತಿ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆ “ಸುವಿಧಾ” ತಂತ್ರಾಂಶದಲ್ಲಿ https://suvidha.eci.gov.in/suvidhaac/ public/login ಅರ್ಜಿ ಸಲ್ಲಿಸಬಹುದಾಗಿದೆ. ಅದೇ ರೀತಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಿ-ವಿಜಿಲ್ ತಂತ್ರಾಂಶದಲ್ಲಿ ದೂರು ದಾಖಲಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ ಇದೀಗ ಜನಸಮಾನ್ಯರು ತಮಗಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಗುಪ್ತವಾಗಿ ಹಾಗೂ ಸುಲಭವಾಗಿ ಹಂಚಿಕೊಳ್ಳಲು ಅನುಕೂಲವಾಗುವಂತೆ ಸಿ-ವಿಜಿಲ್ ತಂತ್ರಾಂಶ ಜಾರಿಗೆ ತಂದಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಬ್ಯಾನರ್, ಪೋಸ್ಟರ್ಗಳನ್ನು ತೆರವುಗೊಳಿಸದೇ ಇರುವುದು, ಹಣ ಹಂಚಿಕೆ, ಮದ್ಯ ಹಂಚಿಕೆ, ಸೀರೆ ಅಥವಾ ಉಚಿತ ಉಡುಗೊರೆಗಳನ್ನು ನೀಡುವುದು, ಅನುಮತಿ ಪಡೆಯದೇ ಸಭೆ ಸಮಾರಂಭಗಳನ್ನು ಆಯೋಜಿಸಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸಿ-ವಿಜಿಲ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಛಾಯಾಚಿತ್ರ, ವಿಡಿಯೋ ಅಥವಾ ಧ್ವನಿಮುದ್ರಿತ ಕ್ಲಿಪಿಂಗ್ಸ್ ಗಳನ್ನು ಕಳುಹಿಸಬಹುದು. ಆ ಮೂಲಕ ದೂರನ್ನು ದಾಖಲಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ರಾಜಕೀಯ ಪಕ್ಷದ ಮುಖಂಡರುಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಧಿತರಿದ್ದರು.