ಆರೋಗ್ಯ

ಜನರ ಗುಂಪು ತಡೆಯಿರಿ: ಅಧಿಕಾರಿಗಳಿಗೆ ಡಿಸಿ ಸಲಹೆ

ಒಬ್ಬರಿಂದೊಬ್ಬರಿಗೆ ಕೊರೋನಾ ವೈರಸ್ ತೀವ್ರ ಹರಡದಂತೆ ಮುಂಜಾಗ್ರತೆ

ವಿಜಯಪಥ ಸಮಗ್ರ ಸುದ್ದಿ

ಬೀದರ: ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳದಲ್ಲಿ ಒಬ್ಬರಿಂದೊಬ್ಬರಿಗೆ ಕೊರೋನಾ ವೈರಸ್ ತೀವ್ರ ಹರಡುವ ಕಾರಣ ಸಾಧ್ಯವಾದಷ್ಟು ಒಂದೇ ಕಡೆ ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿಲ್ಲೆಯ ಎಲ್ಲ ತಹಸೀಲ್ದಾರರಿಗೆ ನಿರ್ದೇಶನ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಣ್ಗಾವಲು ಘಟಕದಿಂದ ಮಾ.17ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೋನಾ ವೈರಸ್ ಸೋಂಕು ತಡೆಗಟ್ಟುವ ಮುಂಜಾಗೃತೆ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಧಾರ್ ನೋಂದಣಿ ಹಾಗೂ ಇನ್ನಿತರೆ ಕಾರ್ಯಕ್ಕಾಗಿ ತಹಸೀಲ್ ಕಚೇರಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆಂದು ಎಲ್ಲ ತಹಸೀಲ್ದಾರರು ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಹಲವಾರು ಸೌಲಭ್ಯಗಳನ್ನು ಕೇಳಿ ಜನರು ಸಹಜವಾಗಿ ಸೇರುತ್ತಾರೆ. ನೀವು ಅವರಿಗೆ ತಿಳಿ ಹೇಳಿ ಗುಂಪಾಗಿ ಸೇರಿ ಬಾರದೇ ಒಬ್ಬೊಬ್ಬರಾಗಿ ಬರುವಂತೆ ತಿಳಿಸಿ ಜನರು ಪರಸ್ಪರ ಸಂಪರ್ಕವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕೊರೋನಾ ವೈರಸ್ ಸಾವಿನ ಕಾಟವೆಂಬಂತೆ ಬಿಂಬಿತವಾಗುತ್ತಿದೆ. ಒಬ್ಬರಿಂದೊಬ್ಬರಿಗೆ ಹರಡದಂತೆ ನೋಡಿಕೊಳ್ಳುವುದೊಂದೇ ಇರುವ ಪರಿಹಾರ ಮಾರ್ಗವಾಗಿದೆ. ಈಗಾಗಲೇ ರಾಷ್ಟ್ರೀಯ ವಿಪತ್ತು ಎಂದು ಬಿಂಬಿತವಾಗಿರುವ ಈ ಕೊರೋನಾ ವೈರಸ್ ತಡೆಯುವ ಕಾರ್ಯದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಭಾಗವಹಿಸಬೇಕಿದೆ. ಹೀಗಾಗಿ ಆಯಾ ತಾಲೂಕುಗಳಲ್ಲಿ ಒಂದು ತಿಂಗಳ ಕಾಲ ಎಲ್ಲಿಯೂ ಜಾತ್ರೆ, ಉತ್ಸವಗಳು ಆಗದಂತೆ ನೋಡಿಕೊಳ್ಳಬೇಕು ಎಂದು  ಸೂಚಿಸಿದರು.

Leave a Reply