ಹನೂರು: ಇಡೀ ದೇಶದಲ್ಲಿಯೇ ರಾಜ್ಯ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದ್ದಾರೆ.
ಗುರುವಾರ ಪಟ್ಟಣದ ಕಲ್ಯಾಣ ಮಂಟಪ ಒಂದರಲ್ಲಿ ಪ್ರಜಾದ್ವನಿ ರಥಾಯಾತ್ರೆ ಸಂಬಂಧ ಆಯೋಜಿಸಿದ್ದ ಕಾರ್ಯಕರ್ತರ ಪೂರ್ವವಭಾವಿ ಉದ್ಘಾಟಿಸಿ ಮಾತನಾಡಿದರು.
ಈಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನವನ್ನು ನೀಡಿ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಆದರೆ ಹಿಂಭಾಗಿಲಿನಿಂದ ಬಂದ ಬಿಜೆಪಿ ಅಭಿವೃದ್ಧಿಗೆ ಮನ್ನಣೆ ನೀಡದೆ, ಸಾಕಷ್ಟು ಭ್ರಷ್ಟಚಾರದಲ್ಲಿ ಮುಳುಗಿ ಹೊಟ್ಟೆಗೆ ಇಟ್ಟಿಲ್ಲದಿದ್ದರೂ ಸಹ ಜುಟ್ಟಿಗೆ ಮಲ್ಲಿಗೆ ಹೂ ಎಂಬ ತತ್ವವನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ಕಳೆದ 8ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸುಮಾರು ₹12 ಲಕ್ಷ ಕೋಟಿ ಶ್ರೀಮಂತರ ಸಾಲಮನ್ನಾ ಮಾಡಿ ಬಡವರ ಪರಇಲ್ಲ ಎಂಬುದನ್ನು ಸಾಬಿತುಪಡಿಸಿದೆ. ಆದ್ದರಿಂದ ಜನವಿರೋಧಿ ಸರ್ಕಾರ ಯಾವ ರೀತಿ ಇದೆ ಎಂದು ಪ್ರತಿಯೊಬ್ಬರೂ ಅರಿತುಕೂಳ್ಳಬೇಕು ಎಂದು ತಿಳಿಸಿದರು.
ಕ್ಷೇತ್ರದ ಜನತೆ ಸ್ವಾಭಿಮಾನ ಕಳೆದುಕೂಳ್ಳಬೇಡಿ : ಹನೂರು ಕಾಂಗ್ರೆಸ್‌ನ ಭದ್ರಕೋಟೆ. ಚುನಾವಣೆ ಸಂದರ್ಭದಲ್ಲಿ ಯಾರೇ ಹಣ ಆಸೆ, ಆಮಿಷ, ನೀಡಿದರೂ ಸಹ ತಮ್ಮ ಸ್ವಾಭಿಮಾನ ಕಳೆದುಕೊಳ್ಳಬೇಡಿ. ಚುನಾವಣೆ ಸಮೀಪಿಸುತ್ತಿದ್ದಂತೆ ಸಾಕಷ್ಟು ಜನರು ಹಣವನ್ನು ನೀಡಲು ಬರಬಹದು ಆದರೆ ಅವರು ಕೋವಿಡ್ ಸಂಕಷ್ಟ ದಿನದಲ್ಲಿ ಎಲ್ಲಿ ಹೋಗಿದ್ದರು. ಅಂದು ಜನರ ಕಷ್ಟಕ್ಕೆ ಭಾಗಿಯಾಗಿದ್ದು ಕ್ಷೇತ್ರದ ಶಾಸಕರು ಅದನ್ನು ಎಂದಿಗೂ ನೀವು ಮರೆಯಬಾರದು ಎಂದರು.
ಪ್ರಸ್ತುತ ಅವಧಿಯಲ್ಲಿ ಬಿಜೆಪಿಯ ಮಲತಾಯಿ ಧೋರಣೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆದರೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಶಾಸಕರು ಸಾಕಷ್ಟು ಅನುದಾನ ತಂದು ಹನೂರು ಅಭಿವೃದ್ಧಿಗೆ ಪಣ ತೊಟ್ಟಿದ್ದರು. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ. ಆದ್ದರಿಂದ ಕಾರ್ಯಕರ್ತರು ಸಣ್ಣ ಪುಟ್ಟ ಮನಸ್ತಾಪಗಳನ್ನು ಮರೆತು ನಾಲ್ಕನೆ ಬಾರಿಗೆ ಶಾಸಕ ನರೇಂದ್ರರ ಗೆಲುವಿಗೆ ಶ್ರಮಿಸಿ ಎಂದು ಕಿವಿ ಮಾತು ಹೇಳಿದರು.
ಈ ವೇಳೆ ಶಾಸಕ ನರೇಂದ್ರ ಮಾತನಾಡಿ, ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ ಕೂಟ್ಟಂತಹ ಭರವಸೆ ಈಡೇರಿಸಿ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಆದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಹನೂರಲ್ಲಿ ಕಾಂಗ್ರೆಸ್ ಶಾಸಕ ಎಂದು ಅಭಿವೃದ್ಧಿಗೆ ಅನುದಾನ ನೀಡದೆ ತಾರತಮ್ಯ ನೀತಿ ಅನುಸರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ, ಚಾಮುಲ್ ನಿರ್ದೇಶಕ ಷಾಹುಲ್ ಅಹಮದ್, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಮುಖಂಡರಾದ ಜಾವದ್ ಅಹಮದ್, ರಾಜ್ಯ ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜ್, ಪಪಂ ಉಪಾಧ್ಯಕ್ಷ ಗಿರೀಶ್, ಮುಖಂಡರಾದ ಪುಟ್ಟರಾಜು, ಪಾಳ್ಯ ಕೃಷ್ಣ, ಪಟಾಸ್ ಪ್ರದೀಪ್, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಮಾದೇಶ್, ಪಟ್ಟಣ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ ಸೇರಿದಂತೆ ವಿವಿಧ ಮುಖಂಡರು ಇದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)