ಯಾರಾದರೂ ನಿಮ್ಮನ್ನು ಅವರ ಅರಮನೆಗೆ ಆಹ್ವಾನಿಸಿದಾಗ ನಿಮಗೆ ಇಷ್ಟವಾದರೆ ಹೋಗಿ. ಆದರೆ ಅದಕ್ಕಾಗಿ ನಿಮ್ಮ ಗುಡಿಸಲಿಗೆ ಬೆಂಕಿ ಹಚ್ಚಿ ಹೋಗಬೇಡಿ. ಒಂದು ವೇಳೆ ಆ ದೊರೆಯು ನಿಮ್ಮ ಜೊತೆಗೆ ಜಗಳಮಾಡಿ ನಿಮ್ಮನ್ನು ಅವನ ಅರಮನೆಯಿಂದ ಹೊರ ಹಾಕಿದರೆ ಆಗ ನೀವು ಎಲ್ಲಿಗೆ ಹೋಗುತ್ತೀರಿ? 18 ಮಾರ್ಚ್ 1956ರಲ್ಲೇ ಬಾಬಾಸಾಹೇಬ್ ಡಾ.ಅಂಬೇಡ್ಕರ್ ಜನರಿಗೆ ಸಲಹೆ ನೀಡಿದ್ದರು.
ಅವರು ಇನ್ನು ಮುಂದುವರಿದು ಮಾತನಾಡುತ್ತಾ, ನೀವು ನಿಮ್ಮನ್ನೇ ಮಾರಾಟ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಿ. ಆದರೆ, ಅದಕ್ಕಾಗಿ ನಿಮ್ಮದೇ ಸಂಘಟನೆಯನ್ನು ನಾಶ ಮಾಡಬೇಡಿ. ನನಗೆ ಹೊರಗಿನವರಿಂದ ಯಾವುದೇ ಅಪಾಯ ಕಾಣುತ್ತಿಲ್ಲ ಬದಲಿಗೆ ನಮ್ಮ ಜನರಿಂದಲೇ ನಮಗೆ ಅಪಾಯವಿದೆ ಎಂದು ಹೇಳಿದ್ದರು.
![](https://vijayapatha.in/wp-content/uploads/2021/07/4-july-ksrtc-300x172.jpg)
ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅವರ ಈ ಮಾತು ಇಂದು ಸಾರಿಗೆ ನೌಕರರಿಗೆ ಅನ್ವಯವಾಗುತ್ತಿದೆಯೇನೋ ಎನಿಸುತ್ತಿದೆ. ಕಾರಣ ಒಗ್ಗಟ್ಟಿನಿಂದ ಇದ್ದ ನೌಕರರು ಡಿಸೆಂಬರ್ ಮತ್ತು ಏಪ್ರಿಲ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹುಮ್ಮಸ್ಸಿನೊಂದಿಗೆ ಹೋರಾಟಕ್ಕೆ ಇಳಿದಿರಿ. ಅದು ಬಹುತೇಕ ಸಫಲತೆಯ ಹಾದಿಯಲ್ಲಿಯೇ ಸಾಗುತ್ತಿತ್ತು. ಆದರೆ, ಕೆಲವರು ಮಾಡಿದ ಎಡವಟ್ಟಿನಿಂದ ಇಂದು 2 ಸಾವಿರಕ್ಕೂ ಹೆಚ್ಚು ನೌಕರರು ವಜಾಗೊಂಡಿದ್ದಾರೆ.
ಈ ನೌಕರರು ಮಾಡದ ತಪ್ಪಿಗೆ ಸಾರಿಗೆ ಸಂಸ್ಥೆಯಲ್ಲಿ ವಜಾದಂಥ ಶಿಕ್ಷೆಯನ್ನು ಅನುಭವಿಸುವಂತಾಗಿದೆ. ಜತೆಗೆ ಇನ್ನು 20 ಸಾವಿರಕ್ಕೂ ಹೆಚ್ಚು ನೌಕರರು ಅಮಾನತು, ವರ್ಗಾವಣೆಯಂತಹ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ಯಾರು ಕಾರಣ ಎಂದು ಒಮ್ಮೆ ನೀವು ಯೋಚಿಸಿದರೆ ತಿಳಿದುಕೊಳ್ಳುವುದಕ್ಕೆ ಹೆಚ್ಚಿನ ಸಮಯ ಬೇಕಿರುವುದಿಲ್ಲ. ಕಾರಣ ನೀವು ಮಾಡಿದ ತಪ್ಪು ನಿಮಗೆ ಗೊತ್ತಾಗುತ್ತದೆ.
ಹೌದು! ಏಪ್ರಿಲ್‌ನಲ್ಲಿ 14ದಿನ ಹೋರಾಟ ನಡೆದಾಗ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಿದ್ದೀರಿ. ಈ ನಿಮ್ಮ ಒಗ್ಗಟ್ಟನ್ನು ಕಂಡ ಸರ್ಕಾರ ಮತ್ತು ಸಾರಿಗೆ ಅಧಿಕಾರಿಗಳೇ ಭಯಗೊಂಡು ಒಂದು ರೀತಿ ಹುಲಿ ಕಂಡ ಜಿಂಕೆಮರಿ ಓಡಿ ಹೋಗುವಂತೆ ದಿಕ್ಕು ತೋಚದವರಂತೆ ಕಂಗಾಲಾಗಿ ನಿಮ್ಮ ಒಕ್ಕಟ್ಟನ್ನು ಒಡೆಯಲೇ ಬೇಕು ಎಂದು ಹಲವು ವಾಮ ಮಾರ್ಗಗಳಲ್ಲಿ ಆಮೀಷವೊಡ್ಡಿ ಜತೆಗೆ ನಿಮ್ಮ ವೀಕ್‌ನೆಸ್ ಅನ್ನು ಬಳಸಿಕೊಂಡರು.
ಇನ್ನು ನೀವು ಆಮೀಷವೊಡ್ಡಿದವರಿಗೆ ತಲೆ ಬಾಗಿ ಅವರು ಹೇಳಿದಂತೆ ಕೇಳಿದಿರಿ. ಇದರಿಂದ ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಅಂದರೇ ಇಡೀ ದೇಶವೇ ನಿಮ್ಮ ಕಡೆ ತಿರುಗಿ ನೋಡುವ ರೀತಿ ಮಾಡುತ್ತಿದ್ದ ನಿಮ್ಮ ಹೋರಾಟ ದಿಕ್ಕಿಲ್ಲದಂತ್ತಾಯಿತು. ಇದರ ಜತೆಗೆ ಕೊರೊನಾ ಮಹಾಮಾರಿಯೂ ಒಂದು ಕಾರಣ ಇರಬಹುದು. ಆದರೆ ಇದರಿಂದ ನಿಮ್ಮ ಹೋರಾಟಕ್ಕೆ ಹಿನ್ನಡೆಯಾಯಿತು ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ.
![](https://vijayapatha.in/wp-content/uploads/2020/12/10-Dec-ksrtc-bmtc-300x190.jpg)
ಇನ್ನು ಸಾರಿಗೆ ನೌಕರರಲ್ಲಿ ಇದ್ದ ಒಗ್ಗಟ್ಟನ್ನು ಒಡೆದ ಖುಷಿಯಲ್ಲಿ ಅಧಿಕಾರಿಗಳು ಹಾಟ್ ಮತ್ತು ಕೂಲ್ ಡ್ರಿಂಕ್ಸ್ ಕುಡಿದು ಸಂಭ್ರಮಿಸಿದರು. ಇದಾವುದು ನಿಮ್ಮ ಕಣ್ಣಿಗೆ ಕಾಣಲೇ ಇಲ್ಲ. ಆದರೂ ಇಂದು ಕೂಡ ಒಂದು ಕ್ವಾಟ್ರು, ಒಂದು ತುಂಡು ಮತ್ತೆ ಕೇವಲ 500 ರೂ. ನಮ್ಮ ಕೈಗಿಟ್ಟರೆ ಅದೇ ಸಾಕು ನಾವು ನಮ್ಮವರನೇ ನಿಂದಿಸುತ್ತೇವೆ ಅವರ ವಿರುದ್ಧವೇ ತಿರುಗಿ ಬೀಳುತ್ತೇವೆ ಎಂಬ ಮನಸ್ಥಿತಿಯಲ್ಲಿ ಇನ್ನು ಹಲವು ಸಾರಿಗೆ ನೌಕರರು ಇರುವುದು ನಿಮ್ಮ ಒಗ್ಗಟ್ಟು ಹಾಳಾಗುತ್ತಿರುವುದಕ್ಕೆ ಪ್ರಮುಖ ಕಾರಣ.
ಆದರೇನು ಇನ್ನೂ ಕಾಲ ಮಿಂಚಿಲ್ಲ. ಈಗಲೂ ನಿಮ್ಮಲ್ಲಿ ನಾವು ಸಾರಿಗೆ ನೌಕರರ ನಮ್ಮ ಕಾಲನ್ನು ನಾವೇ ಎಳೆದುಕೊಂಡು ಜಾರಿ ಬಿದ್ದು ಇನ್ನೊಬ್ಬರು ಅದನ್ನು ನೋಡಿ ನಗುವಂತೆ ಮಾಡಿಕೊಳ್ಳುವುದು ಬೇಡ ಎಂಬುದನ್ನು ಅರಿಯಿರಿ. ಇದರಿಂದ ನಿಮ್ಮ ಶಕ್ತಿ ಬಲಗೊಳ್ಳುತ್ತ ಹೋಗುತ್ತದೆ. ಅದನ್ನು ಬಿಟ್ಟು ಒಂದೇ ಕುಟುಂಬದವರಾದ ನೀವು ಕಿತ್ತಾಡಿಕೊಂಡು ಕೇಸು, ದೂರು ಎಂದು ಅಲೆಯುವುದರಲ್ಲೇ ಕಾಲ ಕಳೆದರೆ ಗುರಿಸಾಧಿಸುವುದು ಯಾವಾಗ?
ಸಮಾಜದಲ್ಲಿ ಇತರರಂತೆ ನಿಮ್ಮ ಕುಟುಂಬಗಳು ಗೌರವಯುತವಾಗಿ ಜೀವನ ನಡೆಸುವುದು ಯಾವಾಗ? ಇನ್ನೂ ಬ್ರಿಟೀಷರ ಕಾಲದಲ್ಲಿ ಇದ್ದ ದೈನೇಹಿ ಸ್ಥಿತಿಯಲ್ಲೇ ಎಷ್ಟು ದಿನ, ವರ್ಷ ಬದುಕಬೇಕೆಂದುಕೊಂಡಿದ್ದೀರಿ. ಈಗಲಾದರೂ ಎಚ್ಚತ್ತುಕೊಂಡು ಒಗ್ಗಟ್ಟಿನಲ್ಲಿ ಬಲವಿದೆ. ಆ ಬಲದ ಹೋರಾಟದಲ್ಲಿ ಜಯವಿದೆ ಎಂಬುದನ್ನು ಅರಿತುಕೊಳ್ಳಿ. ಈ ಮೂಲಕ ನೀವೆ ನಿಮ್ಮವರ ಮೇಲೆ ಕೊಟ್ಟಿರುವ ದೂರುಗಳನ್ನು ವಾಪಸ್ ಪಡೆದು ಒಂದಾಗಿ. ಹೀಗೆ ಮಾಡಿದರೆ ನಿಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳುತ್ತದೆ.
ನಿಮ್ಮ ಒಗ್ಗಟ್ಟು ನಿಮ್ಮ ಜೀವನ ಉತ್ತಮಗೊಳಿಸಲು ಬುನಾದಿ ಹಾಕುತ್ತದೆ. ಕಾನೂನಾತ್ಮಕವಾದ ನಿಮ್ಮ ಹೋರಾಟಕ್ಕೆ ಎಷ್ಟೇ ಅಡ್ಡಿ ಆತಂಕಗಳು ಎದುರಾದರು ಅದನ್ನು ಕುಟ್ಟಿಪುಡಿಮಾಡುವ ಶಕ್ತಿ ಇದೆ ಎಂಬುದನ್ನು ಅರಿಯಿರಿ. ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ ನೌಕರರೇ…..
![](https://vijayapatha.in/wp-content/uploads/2024/02/QR-Code-VP-1-1-300x62.png)