ಚಾಮರಾಜನಗರ: ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ 3000 ಕ್ಯೂಸೆಕ್ ನೀರನ್ನು ಹರಿಸಲು ಆದೇಶಿಸಿದ್ದು ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಆಕ್ಷೇಪಣೆ ಸಲ್ಲಿಸಲು ತೀರ್ಮಾನ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿದ್ದಾರೆ.
ಜಿಲ್ಲೆಯ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ದೇವಸ್ಥಾನದ ರಂಗಮಂದಿರದಲ್ಲಿ ಆಯೋಜಿಸಿದ್ದ ಸಾಮೂಹಿಕ ಸರಳ ವಿವಾಹ ಮಹೋತ್ಸವಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಳೆ ಕೈಕೊಟ್ಟು 195 ತಾಲೂಕು ಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ಬಿಡಲು ನೀರು ಎಲ್ಲಿದೆ ಎಂದು ಪ್ರಶ‍್ನಿಸಿದರಲ್ಲದೆ, ಮಹದೇಶ್ವರನಲ್ಲಿ ಮಳೆಗಾಗಿ, ರಾಜ್ಯದ ಜನರಿಗೆ, ರೈತರಿಗೆ ಸೌಖ್ಯವಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ. ಅದಕ್ಕಾಗಿಯೇ ಹಿಂದೆ ಮುಖ್ಯಮಂತ್ರಿ ಯಾದ ಕೂಡಲೇ ಚಾಮರಾಜನಗರಕ್ಕೆ ಭೇಟಿ ನೀಡಿದೆ. ಸುಮಾರು 12 ಬಾರಿ ಭೇಟಿ ನೀಡಿದ್ದು, 5 ವರ್ಷ ಮುಖ್ಯಮಂತ್ರಿಯಾಗಿಯೇ ಇದ್ದೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ಈಗ ಹೋಗಿದೆ ಎಂದರು.
ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್‌ಗೆ ಕರೆನೀಡಿರುವ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಆದೇಶ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದರು.
ಇನ್ನು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ದೇವಸ್ಥಾನದ ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಸರಳ ವಿವಾಹದಲ್ಲಿ ಪಾಲ್ಗೊಂಡ ಅವರು, ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಅದ್ದೂರಿ ಮದುವೆಗಳು ಬಹಳ ದೊಡ್ಡ ಹೊರೆಯಾಗುತ್ತವೆ. ಜೀವನ ಪರ್ಯಂತ ಸಾಲ ತೀರಿಸುತ್ತಾ ಕೂರಬೇಕಾಗುತ್ತದೆ. ಆದ್ದರಿಂದ ಸರಳ ಮತ್ತು ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದರು.
ಮಹದೇಶ್ವರನ ಬೆಟ್ಟ ಅಧ್ಯಾತ್ಮಿಕ ಮಹತ್ವ ಇರುವ ಪುಣ್ಯ ಸ್ಥಳ. ಶೂದ್ರರು, ಶ್ರಮಿಕರು, ಬಡವರು, ಎಲ್ಲಾ ಜಾತಿಯವರ ಅಧ್ಯಾತ್ಮಿಕ ಕೇಂದ್ರವಾಗಿದೆ. ಈ ಕಾರಣಕ್ಕೇ ನನಗೆ ಈ ಕ್ಷೇತ್ರದ ಬಗ್ಗೆ ಅತ್ಯಂತ ಶ್ರದ್ದೆ ಮತ್ತು ಗೌರವ ಇದೆ. ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಈಗ ಪ್ರಾಧಿಕಾರದ ಆದಾಯವೂ ಹೆಚ್ಚಾಗಿದೆ. ಶಕ್ತಿ ಯೋಜನೆಯ ಪರಿಣಾಮ ಭಕ್ತರು, ಅದರಲ್ಲೂ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾದಪ್ಪನ ದರ್ಶನ ಪಡೆಯುತ್ತಿದ್ದಾರೆ ಎಂದರು.
![](https://vijayapatha.in/wp-content/uploads/2023/09/27-Sep-siddaramaih-300x169.jpg)
ಸಾಮೂಹಿಕ ಸರಳ ವಿವಾಹ ಮಹೋತ್ಸವದಲ್ಲಿ ಅವರು ಪಾಲ್ಗೊಂಡು ನವ ದಂಪತಿಗಳಿಗೆ ಶುಭ ಹಾರೈಸಿದರು. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶ್ರೀ ಪಟ್ಟದ ಗುರುಸ್ವಾಮಿಗಳು, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಶಾಸಕ ಎಂ.ಆರ್.ಮಂಜುನಾಥ್, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಜಿಲ್ಲೆಯ ಶಾಸಕರು ಮತ್ತು ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)