ಬೆಂಗಳೂರು: ಕಳೆದ ಆರು ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಮಾಡುತ್ತಿರುವುದು ಸರ್ಕಾರದ ಜನ ವಿರೋಧಿ ಕ್ರಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ವಿಶ್ವ ಮಾರಿ ಕೊರೊನಾದಿಂದ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿ ನರಳುತ್ತಿರುವ ಜನಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರವೇ ಅವರನ್ನು ಲೂಟಿ ಮಾಡಲು ಹೊರಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗೆ ಜನರನ್ನು ಕಿತ್ತು ತಿನ್ನುವ ಪ್ರವೃತ್ತಿಯನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು ಇಲ್ಲವಾದರೆ ಜನರೇ ಸಿಡಿದೇಳುವ ಕಾಲ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಭಾನುವಾರದಿಂದ ಇಂದಿನವರೆಗೂ ನಿತ್ಯ ಇಂಧನ ಬೆಲೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ಪ್ರತಿ ಲೀಟರಿಗೆ 3.30 ರೂ. ಹಾಗೂ ಡೀಸೆಲ್ ಗೆ ಪ್ರತಿ ಲೀಟರ್ ಗೆ 3.42 ರೂ. ಹೆಚ್ಚಳ ಮಾಡಿದೆ. ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರ ಅವೈಜ್ಞಾನಿಕ ಲಾಕ್ ಡೌನ್ ಹೇರಿಕೆ ಮಾಡಿ ಕೈಗಾರಿಕೆ ವ್ಯಾಪಾರೋದ್ಯಮ ಆರ್ಥಿಕ ವಲಯ ನೆಲಕಚ್ಚುವಂತೆ ಮಾಡಿದೆ.
ಇಂಥ ಸಂಕಷ್ಟದ ಸಮಯದಲ್ಲಿ ಮತ್ತೆ ಕೈಗಾರಿಕೆಗಳನ್ನು ಮೇಲೆತ್ತಲು ಸರ್ಕಾರದಿಂದ ದೊಡ್ಡ ಮಟ್ಟದ ನೆರವಿನ ಅಗತ್ಯವಿದೆ. ಆದರೆ ಸರ್ಕಾರ ಅದನ್ನು ಬಿಟ್ಟು ಗಾಯದ ಮೇಲೆ ಬರೆ ಎಳೆದಂತೆ ಸಾಮಾನ್ಯರಿಗೆ ಹೊರೆ ಆಗುವ ರೀತಿಯಲ್ಲಿ ಇಂಧನ ಬೆಲೆಯನ್ನು ನಿರಂತರವಾಗಿ ಏರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)