ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಪಿಂಚಿಣಿದಾರರ ಸಂಘದಿಂದ ವತಿಯಿಂದ ಆಯೋಜಿಸಿದ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನಾ ಸಭೆ ನಗರದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಮಂಗಳವಾರ ಆವೇಶಭರಿತವಾಗಿ ಜರುಗಿತು.
ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಸಲುವಾಗಿ ಅಧಿಕಾರಿಗಳು, ಪೊಲೀಸ್ ಉನ್ನತಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಜತೆ ಎರಡು ಬಿಎಂಟಿಸಿ ಬಸ್‌ಗಳನ್ನು ಆವರಣದಲ್ಲಿ ನಿಲ್ಲಿಸಿಕೊಂಡು ಮುಂಜಾಗ್ರತೆ ವಹಿಸಿದ್ದರು.
ಇನ್ನು ಸ್ಥಳದಲ್ಲಿ ಪೊಲೀಸ್ ಮತ್ತು ಇತರ ಅಧಿಕಾರಿಗಳು ಬಂದಿದ್ದರಿಂದ ಕ್ಷಣಹೊತ್ತು ಆತಂಕದ ವಾತಾವರಣವನ್ನು ಸೃಷ್ಟಿಯಾಗಿತ್ತು. ಆದರೆ, ಅದಕ್ಕೆಲ್ಲ ನಿವೃತ್ತರು ಅಂಜದೆ ಎಂದಿನಂತೆ ಘೋಷಣೆಯೊಂದಿಗೆ ಪ್ರತಿಭಟನೆಯನ್ನು ಪೊಲೀಸ ಸಮ್ಮುಖದಲ್ಲಿಯೇ ಧಿಕ್ಕಾರ ಕೂಗುತ್ತಾ ಪ್ರಾರಂಭಿಸಿದರು.
![](https://vijayapatha.in/wp-content/uploads/2023/11/29-Nov-ksrtc-pensioner-protest-1-300x167.jpg)
ಈ ವೇಳೆ ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ ಮಾತನಾಡಿ, ಡಿಸೆಂಬರ್ 7ರಂದು ಇದರ ಮುಂದುವರಿದ ಭಾಗವಾಗಿ ದೆಹಲಿಯ ರಾಮಲೀಲಾ ಮೈದಾನ, ನಂತರ ಜಂತರ್ ಮಂತರ್‌ನಲ್ಲಿ ಕಮಾಂಡರ್ ಅಶೋಕ್ ರಾಹುತ್ ಅವರ ನೇತೃತ್ವದಲ್ಲಿ ಡಿ.24ರವರೆಗೂ ಪ್ರತಿಭಟನೆ ನಡೆಸಲಾಗುವುದು. ಅಂದು ದೇಶಾದ್ಯಂತ ಇರುವ ಲಕ್ಷಾಂತರ ನಿವೃತ್ತರು ಆಗಮಿಸಲಿದ್ದು ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸದೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿಲಿದ್ದು, ಅಧಿವೇಶನದಲ್ಲಿ ನಿವೃತ್ತರ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳಬೇಕು. ಇಲ್ಲದೆ ಹೋದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ನಿವೃತ್ತರು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ನಮ್ಮ ರಾಜ್ಯದಿಂದ ಸುಮಾರು 300 ನಿವೃತ್ತರು ಭಾಗವಹಿಸಲಿದ್ದಾರೆ ಇದರ ಬಿಸಿ ಯಾವ ಮಟ್ಟದಲ್ಲಿ ತಟ್ಟಲಿದೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರ ಕೂಡಲೇ ಜಾಗೃತಗೊಂಡು, ನಮ್ಮ ಕನಿಷ್ಠ ಪಿಂಚಣಿ ಬೇಡಿಕೆ 7500 ರೂ. ಜತೆಗೆ ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಸುಬ್ಬಣ್ಣ ಮಾತನಾಡಿ, ನಿವೃತ್ತರೆಲ್ಲರೂ ಹಲವಾರು ದಶಕಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದು, ಈಗ ನಮಗೆ ನೀಡುತ್ತಿರುವ ಪಿಂಚಣಿ ಕೇವಲ ಒಂದು ಸಾವಿರದಿಂದ 3000 ರೂ. ಆಗಿದ್ದು, ಈ ಮೊತ್ತದಲ್ಲಿ ನಿವೃತ್ತರ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಕೇಂದ್ರ ಸರ್ಕಾರ ಮತ್ತು ಇಪಿಎಫ್ ಅಧಿಕಾರಿಗಳು ನಮ್ಮ ಸಂಕಷ್ಟಗಳನ್ನು ಮನಗಂಡು, ಕೂಡಲೇ ನ್ಯಾಯ ಸಮ್ಮತ ಪಿಂಚಣಿ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಭವಿಷ್ಯ ನಿಧಿ ಪ್ರಾಧಿಕಾರಸ್ಥರು ಮನವಿ ಪತ್ರ ಸ್ವೀಕರಿಸಿ ಮಾತನಾಡುತ್ತಾ, ನಿವೃತ್ತರ ಸಂಕಷ್ಟಗಳ ಬಗ್ಗೆ ತಮಗೂ ಸಹ ಅರಿವಿದೆ. ಈ ಮನವಿ ಪತ್ರವನ್ನು ಕೇಂದ್ರ ಸರ್ಕಾರದ ಸಚಿವರಿಗೆ ಕೂಡಲೇ ತಮ್ಮ ಶಿಫಾರಸ್ಸಿನೊಂದಿಗೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪ ಸೇರಿದಂತೆ ನೂರಾರು ನಿವೃತ್ತ ನೌಕರರು ಭಾಗವಹಿಸಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)