ಬೆಂಗಳೂರು: ಸುಗ್ರೀವಾಜ್ಞೆ ಮೂಲಕ ಕರ್ನಾಟಕ ಭೂ ಸುಧಾರಣಾ ಕಾಯ್ದೆ 79ಎ 79 ಬಿ ತಿದ್ದುಪಡಿಮಾಡಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಸೋಂಕು ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ಸದ್ಯಕ್ಕೆ ನಡೆಯುವುದು ಅನುಮಾನ. ಹಾಗಾಗಿ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತಂದು ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಭೂಮಿ ಮಾರಾಟದ ಮೇಲಿನ ನಿರ್ಬಂಧ ಸಡಿಲಿಸಲು ಈ ಕಾಯ್ದೆ ತಿದ್ದುಪಡಿಗೆ ನಿರ್ಧರಿಸಲಾಗಿದೆ. ವಿಶೇಷಾಜ್ಞೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ಬಳಿಕ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಎಸಿ, ತಹಸೀಲ್ದಾರ್ ಕಚೇರಿಯಲ್ಲಿ ಜನರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವ ಉದ್ದೇಶದಿಂದ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದೇವೆ ಎಂದರು.
ನಮ್ಮ ರಾಜ್ಯದ ಐಟಿ ಬಿಟಿ ಜನರು ಈಗಿರುವ ಕಾನೂನಿನಿಂದ ಭೂಮಿ ಖರೀದಿಸಲು ಸಾಧ್ಯವಾಗದೆ ನೆರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಹಾಗಾಗಿ ಯಾರು ಬೇಕಾದರೂ ಕೃಷಿ ಕ್ಷೇತ್ರಕ್ಕೆ ಬರಲು ಈ ಕಾಯ್ದೆ ತರುತ್ತಿದ್ದೇವೆ ಎಂದು ಅಶೋಕ್ ಸಮರ್ಥಿಸಿಕೊಂಡರು.
ರಾಜ್ಯದಲ್ಲಿ 11.79 ಲಕ್ಷ ಹೆಕ್ಟೇರ್ ಭೂಮಿ ಪಾಳು ಬಿದ್ದಿದೆ. ಇದರಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಕೃಷಿ ಕ್ಷೇತ್ರಕ್ಕೆ ಬರುವ ಆಸಕ್ತಿ ಇರುವವರಿಗೆ ಇನ್ನು ಮುಂದೆ ಇದರಿಂದ ಅವಕಾಶ ಸಿಗಲಿದೆ ಎಂದರು.
ಐಟಿ-ಬಿಟಿ ಜನರು ಕೃಷಿ ಕಡೆ ಆಸಕ್ತಿ ತಳೆಯುತ್ತಿದ್ದಾರೆ ಹಾಗಾಗಿ ಹಳ್ಳಿಗೆ ನಡೆಯಿರಿ ನೇಗಿಲಯೋಗಿ ಆಗಿ ಎನ್ನುವ ಘೋಷ ವಾಕ್ಯದೊಂದಿಗೆ ಯೋಜನೆ ಜಾರಿಗೊಳಿಸುತ್ತೇವೆ. ಇದರಿಂದ ಕೃಷಿ ಉತ್ಪನ್ನವೂ ಹೆಚ್ಚಾಗುವುದು ಎಂದು ತಿಳಿಸಿದರು.