ಬೆಂಗಳೂರು ಗ್ರಾಮಾಂತರ: ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಮತ್ತಿತರ ಜನಪರ ಕಾರ್ಯಕ್ರಮಗಳ ಮೂಲಕ ಜಿಲ್ಲಾಡಳಿತ ಜನರ ಬಳಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ 42 ಬಾರಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಗಳ ಮೂಲಕ ಸುಮಾರು 1 ಲಕ್ಷ 35 ಸಾವಿರಕ್ಕೂ ಅಧಿಕ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಸಹಯೋಗದಲ್ಲಿ ಇಂದು ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು,
ಸ್ವತಃ ಕಂದಾಯ ಸಚಿವರು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದೆ. ಹೊಸಕೋಟೆ ತಾಲೂಕಿನ 10 ಸಾವಿರಕ್ಕೂ ಅಧಿಕ ನಿವೇಶನ ರಹಿತರಿಗೆ ವಿವಿಧೆಡೆ ಲಭ್ಯ ಇರುವ ಸುಮಾರು 290 ಎಕರೆ ಸರ್ಕಾರಿ ಜಮೀನಿನಲ್ಲಿ ಉಚಿತ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲಾಗಿದೆ ಎಂದರು.
ಹೊಸಕೋಟೆ ನಗರಸಭೆಯ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಉಚಿತ ವಸತಿ ಸೌಕರ್ಯ ಕಲ್ಪಿಸಲು 20 ಗುಂಟೆ ನಿವೇಶನ ಒದಗಿಸಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ, ಪೌತಿಖಾತೆ, ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು, ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಮುಖ್ಯಮಂತ್ರಿ ರೈತವಿದ್ಯಾನಿಧಿ ಯೋಜನೆಯಡಿ ಶಿಷ್ಯವೇತನ ಒದಗಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 1090ಕ್ಕೂ ಹೆಚ್ಚು ಇ-ಸ್ವತ್ತು ಖಾತೆಗಳ ವಿತರಣೆಗೆ ಕ್ರಮವಹಿಸಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಜಲಜೀವನ ಮಿಷನ್ನಿನ 40 ಕೋಟಿ ರೂ.ಗಳ ವೆಚ್ಚದ ಮನೆ ಮನೆಗೆ ನಲ್ಲಿಗಳ ಸಂಪರ್ಕವೂ ಸೇರಿ ಸುಮಾರು 48 ಕೋಟಿ ರೂ.ಮೌಲ್ಯದ ಸೌಕರ್ಯಗಳನ್ನು ವಿತರಿಸಲಾಗುತ್ತಿದೆ. ಜಡಿಗೇನಹಳ್ಳಿ ಹಾಗೂ ಸುತ್ತಲಿನ ಜನರ ಅಹವಾಲುಗಳನ್ನು ಕಂದಾಯ ಸಚಿವರು ಇಂದು ಸ್ವತಃ ಸ್ವೀಕರಿಸಿ ಪರಿಹಾರ ಒದಗಿಸಲಿದ್ದಾರೆ ಎಂದರು.
ಅಂಬಿಗರ ಚೌಡಯ್ಯ ಜಯಂತಿ: ನಿಜಶರಣ, ವಚನಕಾರ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ವೇದಿಕೆಯಲ್ಲಿ ಗೌರವ ಅರ್ಪಿಸಲಾಯಿತು.
28 ಸಾವಿರಕ್ಕೂ ಅಧಿಕಸೌಲಭ್ಯಗಳ ವಿತರಣೆ: ವಿಕಲಚೇತನರಿಗೆ ಕೃತಕ ಕಾಲುಗಳ ಜೋಡಣೆ,ಗಾಲಿ ಖುರ್ಚಿಗಳು, ಮುಜರಾಯಿ ಇ-ಸ್ವತ್ತು ದಾಖಲೆಗಳು,94 ಸಿ ಹಾಗೂ 94 ಸಿಸಿ ಅಡಿ ಅಕ್ರಮ -ಸಕ್ರಮಗಳ ಹಕ್ಕು ಪತ್ರಗಳು, ಮಾಜಿ ಸೈನಿಕರಿಗೆ ನಿವೇಶನ, ಹೊಸಕೋಟೆ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಉಚಿತ ವಸತಿ ಸೌಕರ್ಯ ಕಲ್ಪಿಸಲು ಗುರುತಿಸಿರುವ 20 ಗುಂಟೆ ನಿವೇಶನದ ವರ್ಗಾವಣೆ, ಇಂದಿರಾ ಗಾಂಧಿ ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ ವೇತನ ,ವಿವಿಧ ಮಾಸಾಶನಗಳ ಮಂಜೂರಾತಿ ಸೇರಿ ಸುಮಾರು 28 ಸಾವಿರಕ್ಕೂ ಅಧಿಕ ವೈಯಕ್ತಿಕ ಫಲಾನುಭವಿಗಳಿಗೆ ಹಕ್ಕು ಪತ್ರ, ಮಂಜೂರಾತಿ ದಾಖಲೆಗಳನ್ನು ನೀಡಲಾಯಿತು.
ಹೊಸಕೋಟೆ ನಗರಸಭೆ ಅಧ್ಯಕ್ಷ ಬಿ.ಕೆ.ನಾಗರಾಜ, ಹೊಸಕೋಟೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಂಕರೇಗೌಡ, ಉಪಾಧ್ಯಕ್ಷೆ ಸುಗುಣಾ, ಜಡಿಗೇನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಪಲ್ಲವಿ ಅರುಣಕುಮಾರ್, ಉಪಾಧ್ಯಕ್ಷ ಎಚ್.ಎನ್.ರವಿಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ರೇವಣಪ್ಪ, ಉಪವಿಭಾಗಾಧಿಕಾರಿ ತೇಜಸ್ ಕುಮಾರ, ತಹಸೀಲ್ದಾರ್ ಮಹೇಶಕುಮಾರ ಸೇರಿದಂತೆ ಜಡಿಗೇನಹಳ್ಳಿ ಗ್ರಾ.ಪಂ.ಸರ್ವ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)