ಬೆಂಗಳೂರು: ರಾಜ್ಯದ ಹವಾಮಾನ, ಮಳೆ ಹಾನಿ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಕೊರತೆಯಾಗದಂತೆ ವಿತರಣೆ ಮಾಡಬೇಕು. ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿ ವಾಸ ಮಾಡಬೇಕು ಎಂದು ತಾಕೀತು ಮಾಡಿರುವುದಾಗಿ ತಿಳಿಸಿದರು.
ಇನ್ನು ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ದೊರೆಯುವಂತೆ ಇರಬೇಕು. ಶಾಲಾ ಅಂಗನವಾಡಿ ಕಟ್ಟಡಗಳು ಸೋರುವಂತೆ ಇದ್ದರೆ ಗುರುತಿಸಿ ಎಸ್‌ಡಿಆರ್‌ಎಫ್ ಅನುದಾನದಲ್ಲಿ ರಿಪೇರಿ ಮಾಡಲಾಗುತ್ತದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸರಾಸರಿ 20 ಕೋಟಿ ರೂ. ಅನುದಾನ ಇದ್ದು ಅಗತ್ಯ ಇರುವ ಕಡೆ ಬಳಸಿ ಎಂದು ತಿಳಿಸಿದರು.
ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಮಳೆಯಿಂದ ಪ್ರಾಣ ಹಾನಿ, ಮನೆ ಹಾನಿ ಉಂಟಾಗಿರುವವರಿಗೆ ಪರಿಹಾರ ವಿತರಣೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಹವಾಮಾನ ಇಲಾಖೆಯ ವರದಿಯ ಪ್ರಕಾರ ಜುಲೈ 29 ರವರಿಗೆ ಉತ್ತಮ ಮಳೆಯಾಗಲಿದೆ. ಆಗಸ್ಟ್ ತಿಂಗಳಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು ಪ್ರತಿದಿನ ರಾಜ್ಯದಲ್ಲಿ ಸರಾಸರಿ 42 ಟಿಎಂಸಿ ನೀರು ಜಲಾಶಯಗಳಲ್ಲಿ ಶೇಖರಣೆ ಆಗುತ್ತಿದೆ ಎಂದು ಸಂತಸ ಹಂಚಿಕೊಂಡರು.
ರಾಜ್ಯದಲ್ಲಿ ಜೂನ್ 01 ರಿಂದ ಇಲ್ಲಿಯವರೆಗೆ 48 ಮಾನವ ಜೀವ ಹಾನಿ ಆಗಿದೆ. 35 ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಸಂಪೂರ್ಣವಾಗಿ 57 ಮನೆಗಳು, ತೀವ್ರವಾಗಿ 208 ಹಾಗೂ 2682 ಮನೆಗಳು ಭಾಗಶಃ ಹಾನಿಗೊಂಡಿದ್ದು, ನಮ್ಮ ಸರ್ಕಾರ ಅಗತ್ಯ ಪರಿಹಾರ ನೀಡಲು ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)