ಮೈಸೂರು: ಕೃಷ್ಣರಾಜ ಯುವ ಬಳಗದ ವತಿಯಿಂದ ನಗರದ ಮೃಗಾಲಯಕ್ಕೆ ಆಗಮಿಸಿದ ಪ್ರವಾಸಿಗರಿಗೆ ಮೈಸೂರು ಪಾಕ್ ಹಾಗೂ ಗುಲಾಬಿ ಹೂ ನೀಡುವ ಮೂಲಕ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಶುಶ್ರೂತ್ ಗೌಡ, ಯುವ ಜನತೆಗೆ ಪರಿಸರ ಕುರಿತು ಅರಿವು ಮೂಡಿಸುವಲ್ಲಿ ಪರಿಸರ ಪ್ರವಾಸೋದ್ಯಮದ ಕೂಡುಗೆ ಮಹತ್ವವಾಗಿದೆ. ಪ್ರವಾಸ ಮಾಡುವುದರಿಂದ ದೇಹ ಮತ್ತು ಮನಸ್ಸಿಗೆ ಚೈತನ್ಯ ಹೆಚ್ಚಿ ಜೀವನೋತ್ಸವ ಹೆಚ್ಚುತ್ತದೆ. ಪ್ರವಾಸೋದ್ಯಮ ಇಂದು ಬೃಹತ್ ಉದ್ಯಮವಾಗಿ ಬೆಳೆದಿದ್ದು, ಪ್ರವಾಸಿ ತಾಣಗಳಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದರು.
ಇನ್ನು ಪ್ರವಾಸ ಬದುಕಿನ ಜಂಜಾಟಗಳ ನಡುವೆ ತುಸು ಅರಾಮವಾಗಿಸಲು ಮನಸು ಮಾನಸಿಕವಾಗಿ ಸಜ್ಜಾಗುತ್ತದೆ. ದೇಶಸುತ್ತು ಕೋಶ ಓದು ಎಂಬ ಮಾತಿನಂತೆ ಪ್ರವಾಸ ಮಾಡುವುದರಿಂದ ಜ್ಞಾನ ವೃದ್ಧಿಯಾಗುವುದರಿಂದ ವಿಶಾಲವಾಗಿ ಯೋಚಿಸುವ ದೃಷ್ಟಿಕೋನ ಬೆಳೆಯುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜಿ.ರಾಘವೇಂದ್ರ, ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ, ಮಹದೇವ, ವರುಣಮಹದೇವು, ರವಿಚಂದ್ರ, ಲೋಕೇಶ್ ಮುಂತಾದವರು ಇದ್ದರು.