ಮೈಸೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವ ಜಾಲ ಇದುವರೆಗೆ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿತ್ತಾದರೂ ಇದೀಗ ಅದು ಬೆಳಕಿಗೆ ಬಂದಿದ್ದು, ಚಾಮರಾಜನಗರ ಪ್ರಾದೇಶಿಕ ಕೇಂದ್ರದಿಂದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಈ ವಿಚಾರ ಹೊರ ಬರುತ್ತಿದ್ದಂತೆಯೇ ಪ್ರಾಮಾಣಿಕ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ತನಿಖೆಯಿಂದ ನೈಜಾಂಶ ಹೊರಬಂದರೆ ಹಲವರಿಗೆ ತೊಂದರೆಯಾಗಲಿದೆ. ಈ ಸಂಬಂಧ ಮುಕ್ತ ವಿಶ್ವವಿದ್ಯಾಲಯದ ಚಾಮರಾಜನಗರ ಪ್ರಾದೇಶಿಕ ಕೇಂದ್ರದ ಇಬ್ಬರು ಹಂಗಾಮಿ ನೌಕರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಮೈಸೂರಿನ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಪರೀಕ್ಷೆ ಹಿಂದಿನ ದಿನ ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿ ಹಣ ಪಡೆಯುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ.
ಚಾಮರಾಜನಗರ ಪ್ರಾದೇಶಿಕ ಕೇಂದ್ರದ ನೌಕರರು ವಾಟ್ಸ್‌ಆ್ಯಪ್ ಮೂಲಕ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಆನ್‌ಲೈನ್ ಮೂಲಕ ಹಣ ಪಡೆದ ಇವರು ಮತ್ತೊಬ್ಬರಿಗೆ ಹಣ ಸಂದಾಯ ಮಾಡುತ್ತಿದ್ದರು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಇದರಲ್ಲಿ ಇನ್ನು ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಿ ಇದರ ಹಿಂದಿನ ಜಾಲವನ್ನು ಬೇಧಿಸುವ ಅಗತ್ಯವಿದೆ. ಬಿ.ಕಾಂ ಅಂತಿಮ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವಾಗ ವಿದ್ಯಾರ್ಥಿ ಗಮನಿಸಿ ಮೈಸೂರಿನ ಜಯಲಕ್ಷ್ಮಿಪುರಂ ಠಾಣೆಗೆ ದೂರು ಕೊಟ್ಟಿದ್ದನು. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರಿಯುತ್ತಿದೆ.