ಮೈಸೂರು: ರಾಜ್ಯಾದ್ಯಂತ ಇಂದಿನಿಂದ ಸರ್ಕಾರಿ ಶಾಲೆಗಳು ಆರಂಭವಾಗಿದ್ದು, ಆಯಾಯ ಶಾಲೆಗಳ ಶಿಕ್ಷಕರು ಮತ್ತು ಶಾಲಾಡಳಿತ ಮಂಡಳಿ ಗುಲಾಬಿ ಹೂ ನೀಡುವ ಮೂಲಕ ಮಕ್ಕಳನ್ನು ಸ್ವಾಗತಿಸಿದ್ದಾರೆ.
ಮೈಸೂರಿನ ಕುವೆಂಪು ನಗರದ ಅನಿಕೇತನ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳಿಗೆ ಚಾಕೊಲೇಟ್ ಮತ್ತು ಗುಲಾಬಿ ಹೂವುಗಳನ್ನು ಕೊಡುವ ಮೂಲಕ ಶಿಕ್ಷಕರು ಸ್ವಾಗತ ಕೋರಿ ಶಾಲೆಗೆ ಬರಮಾಡಿಕೊಂಡರು.
![](https://vijayapatha.in/wp-content/uploads/2023/05/31-May-Bhoomika-2-300x168.jpg)
ಇದೇ ವೇಳೆ ಕುವೆಂಪುನಗರದ ಕಾರ್ಪೊರೇಟರ್ ರಮೇಶ್ ಅವರು ಮಕ್ಕಳಿಗೆ ಪುಸ್ತಕ, ಪೆನ್ ಮತ್ತು ಬಟ್ಟೆಗಳನ್ನು ಕೊಟ್ಟು ಶುಭ ಕೋರಿದರು.
ಬೇಸಿಗೆ ರಜೆ ಕಳೆದು ಇಂದು (ಮೇ 31) ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿದ್ದು ಪರೀಕ್ಷೆ ಬರೆದು ಇಷ್ಟು ದಿನ ಬೀಸಿಗೆ ರಜೆಯಲ್ಲಿದ್ದ ಮಕ್ಕಳು ಲವಲವಿಕೆಯಿಂದಲೇ ಶಾಲೆಗೆ ಬಂದರು.
ನೋಟ್ ಮತ್ತು ಪಠ್ಯ ಪುಸ್ತಕಗಳಿರುವ ಬ್ಯಾಗ್‌ಅನ್ನು ಹೆಗಲ ಮೇಲೆ ಹೇರಿಕೊಂಡು ಯುದ್ಧಕ್ಕೆ ಸಜ್ಜಾದವರಂತೆ ಶಾಲೆಯತ್ತ ಮುಖಮಾಡಿರುವುದು ಶಿಕ್ಷಕರ ಮತ್ತು ಪೋಷಕರ ಮುಖದಲ್ಲಿ ಮಂದಹಾಸ ಬೀರುತ್ತಿದೆ.
![](https://vijayapatha.in/wp-content/uploads/2023/05/31-May-Bhoomika-1-300x162.jpg)
ಇನ್ನು 2023 -24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಇಂದಿನಿಂದ ರಾಜ್ಯದೆಲ್ಲೆಡೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭ ಆಗಿವೆ. ಈ ಹಿನ್ನೆಲೆ ಹಲವೆಡೆ ಈಗಾಗಲೇ ನಿನ್ನೆಯಿಂದಲೂ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ಸೂಷ್ಟಿಸಿದ್ದು ನಯನ ಮನೋಹರವಾಗಿತ್ತು.
ಅಲ್ಲದೆ ಶಿಕ್ಷಣ ಇಲಾಖೆಯೂ ಸೂಚನೆ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಗುಲಾಬಿ ಹೂ ಹಾಗೂ ಚಾಕೊಲೇಟ್ ನೀಡುವ ಮೂಲಕ ಶಾಲೆಗೆ ಬರಮಾಡಿಕೊಂಡಿದ್ದು, ಮಕ್ಕಳ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.
ಶಾಲೆ ಆರಂಭವಾಗಿರುವ ಹಿನ್ನೆಲೆ ಈಗಾಗಲೇ ರಾಜ್ಯಾದ್ಯಂತ ಇರುವ ಎಲ್ಲ ಶಾಲೆಗಳಲ್ಲಿಯೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೇ 29 ಮತ್ತು ಮೇ 31ರಂದು ಶಾಲೆಯ ಕೊಠಡಿ, ಶೌಚಾಲಯ, ಕಾಂಪೌಂಡ್, ಆವರಣ ಎಲ್ಲವನ್ನು ಹಿರಿಯ ವಿದ್ಯಾರ್ಥಿಗಳು ಹಾಗೂ ಸಹಾಯಕರೊಂದಿಗೆ ಶಿಕ್ಷಕರು ಸ್ವಚ್ಛಗೊಳಿಸಿ ಮೊದಲ ದಿನ ಮಕ್ಕಳನ್ನು ಬರಮಾಡಿಕೊಳ್ಳಲು ಸನ್ನದ್ಧರಾಗಿದ್ದು, ಅಲ್ಲದೆ ಮಕ್ಕಳನ್ನು ಶಾಲೆಯವರೆಗೂ ಬಿಡಲು ಪೋಷಕರು ಕೂಡ ಬಂದಿದ್ದು ಸಂತಸದ ವಾತಾವರಣಕ್ಕೆ ಸಾಕ್ಷಿಕರಿಸಿತ್ತು.
ಶಾಲೆಗೆ ಆಗಮಿಸಿದ ಮಕ್ಕಳಿಗೆ ಮೊದಲದಿನವಾದ ಇಂದು ಬಿಸಿಯೂಟದ ಜತೆ ಸಿಹಿ ಹಂಚಬೇಕು. ನಂತರ ಸ್ವಲ್ಪ ಸಮಯದ ಬಳಿಕ ಶೈಕ್ಷಣಿಕ ತರಗತಿಗಳನ್ನು ಪ್ರಾರಂಭಿಸಬೇಕು ಎನ್ನುವ ಮಾಹಿತಿಯನ್ನು ಶಿಕ್ಷಣ ಇಲಾಖೆ ನೀಡಿತ್ತು. ಮತ್ತೊಂದೆಡೆ ಇದೀಗ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಆದ್ದರಿಂದ ಒಂದು ವೇಳೆ ಮಕ್ಕಳು ಶಾಲೆಗೆ ಬರಲಾಗದಿದ್ದರೆ ರಜೆ ಘೋಷಿಸಲು ಸಹ ಸೂಚನೆ ನೀಡಲಾಗಿತ್ತು. ಆದರೆ ಆ ರೀತಿಯ ವಾತಾವರಣ ಬಹುತೇಕವಾಗಿ ಇರಲಿಲ್ಲ ಎನ್ನಬಹುದು.
ಒಟ್ಟಾರೆ, ಇಂದಿಬಿಂದ 2023-24ನೇ ಶೈಕ್ಷಣಿಕ ತರಗತಿಗಳು ಆರಂಭವಾಗಿದ್ದು, ಶಾಲೆಗೆ ಬಹುತೇಕ ಎಲ್ಲ ಮಕ್ಕಳು ಖುಷಿಯಿಂದಲೇ ಬಂದಿದ್ದಾರೆ. ಇನ್ನು ಶಾಲೆ ಆರಂಭವಾಗುತ್ತಿದ್ದು, ಎಲ್ಲರೂ ಶಾಲೆಗೆ ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ಅವರು ಮಕ್ಕಳಿಗೆ ಪತ್ರ ಬರೆಯುವ ಮೂಲಕ ಸ್ವಾಗತ ಕೋರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)