NEWSನಮ್ಮರಾಜ್ಯರಾಜಕೀಯವಿಡಿಯೋ

ರಾಜ್ಯದಲ್ಲಿ ಸತ್ತು ಹೋಗಿರುವ ಕಾನೂನು ಸುವ್ಯವಸ್ಥೆ: ಎಎಪಿಯಿಂದ ಕ್ಯಾಂಡಲ್‌ ಲೈಟ್‌ ಮೆರವಣಿಗೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಸತ್ತು ಹೋಗಿದ್ದು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಕೆಲವೇ ದಿನಗಳಲ್ಲಿ ಕರ್ನಾಟಕವು ಬಿಹಾರ, ಉತ್ತರ ಪ್ರದೇಶದಂತೆ ʻಅಪರಾಧಗಳ ರಾಜ್ಯʼ ಆಗಲಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಎಎಪಿ ವತಿಯಿಂದ ನಡೆದ ಮೇಣದ ಬತ್ತಿ ಬೆಳಕಿನ ಮೆರವಣಿಗೆಯಲ್ಲಿ ಮಾತನಾಡಿದ ಜಗದೀಶ್‌, “ರಾಜ್ಯಾದ್ಯಂತ ಕೊಲೆ, ಸುಲಿಗೆ, ಅತ್ಯಾಚಾರ, ಕಳ್ಳತನ, ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸೈಬರ್‌ ಕ್ರೈಂ ಇಲಾಖೆಯು ಸಂಪೂರ್ಣ ಸತ್ತು ಹೋಗಿದ್ದು, ಆನ್‌ಲೈನ್‌ ಅಪರಾಧಗಳು ಮಿತಿಮೀರಿವೆ ಎಂದು ಆತಂಕ ವ್ಯಕ್ತಪಡಿಸಿದರು.

2019ರ ಜನವರಿಯಿಂದ 2021ರ ಮೇ ತನಕ ಬರೋಬ್ಬರಿ 1,168 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ, ಪ್ರತಿದಿನ ಸರಾಸರಿ ಒಂದಕ್ಕಿಂತಲೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. 1,168 ಅತ್ಯಾಚಾರಗಳ ಪೈಕಿ 22 ಪ್ರಕರಣಗಳು ಸಾಮೂಹಿಕ ಅತ್ಯಾಚಾರಗಳು. 18 ಮಹಿಳೆಯರನ್ನು ಅತ್ಯಾಚಾರದ ಬಳಿಕ ಕೊಲೆ ಮಾಡಲಾಗಿದೆ ಎಂದು ಹೇಳಿದರು.

2018ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಅಧಿಕಾರ ದಾಹದಿಂದಾಗಿ ಒಂದೇ ಅವಧಿಯಲ್ಲಿ ಮೂರು ಮುಖ್ಯಮಂತ್ರಿ, ಹಲವು ಗೃಹ ಸಚಿವರನ್ನು ನೋಡಬೇಕಾದ ದೌರ್ಭಾಗ್ಯ ನಮ್ಮದಾಗಿದೆ. ಈಗಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಗಳನ್ನು ಗಮನಿಸಿದರೆ, ಸದ್ಯದಲ್ಲೇ ಮತ್ತೊಬ್ಬ ಗೃಹ ಸಚಿವರನ್ನು ಕೂಡ ನೋಡಬೇಕಾಗುತ್ತದೆ ಎಂದು ಅನಿಸುತ್ತಿದೆ.

ಮೂರು ವರ್ಷಗಳ ರಾಜಕೀಯ ಅಸ್ತಿರತೆ ಹಾಗೂ ಗೃಹ ಸಚಿವರ ನಿಷ್ಕ್ರಿಯತೆಯಿಂದಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್‌ ಅಧಿಕಾರಿಗಳಿಂದ ಕಮಿಷನ್‌ ಪಡೆದು ವರ್ಗಾವಣೆ ಮಾಡುವುದಕ್ಕೆ ತೋರಿದ ಆಸಕ್ತಿಯನ್ನು ಜನರ ರಕ್ಷಣೆಗೆ ತೋರಿದ್ದರೆ ಇಂದು ಈ ದುಃಸ್ಥಿತಿ ಬರುತ್ತಿರಲಿಲ್ಲ. ಜನಪ್ರತಿನಿಧಿಗಳ ಹಣ, ಅಧಿಕಾರದ ದಾಹಕ್ಕೆ ಹಾಗೂ ನಿಷ್ಕ್ರಿಯತೆಗೆ ನಾಡಿನ ಜನತೆ ಆತಂಕದಲ್ಲಿ ಬದುಕಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಂ ಬಸವರಾಜ್‌ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ದೆಹಲಿಗೆ ತೆರಳಿ ಮಹಿಳೆಯರ ಸುರಕ್ಷತೆ ಬಗ್ಗೆ ಸಿಎಂ ಅರವಿಂದ್‌ ಕೇಜ್ರಿವಾಲ್‌ರಿಂದ ಟ್ಯೂಷನ್‌ ತೆಗೆದುಕೊಂಡು ಬರಲಿ. ಶಾಂಘೈ, ನ್ಯೂಯಾರ್ಕ್‌, ಲಂಡನ್‌ ನಗರಗಳಿಗಿಂತಲೂ ಹೆಚ್ಚಿನ ಸಿಸಿಟಿವಿಗಳು ದೆಹಲಿಯಲ್ಲಿದೆ. ಪ್ರತಿ ಚದರ ಮೈಲಿಗೆ ಒಂದರಂತೆ ಸರಾಸರಿ 1826 ಸಿಸಿಟಿವಿಯನ್ನು ದೆಹಲಿ ಹೊಂದಿದೆ.

ನಮ್ಮ ಕರ್ನಾಟಕ ಸರ್ಕಾರಕ್ಕೆ ಸಿಸಿಟಿವಿ ಅಳವಡಿಸುವುದು ಹಾಗಿರಲಿ, ಬೀದಿದೀಪ ಸರಿಪಡಿಸಲೂ ಸಾಧ್ಯವಾಗಿಲ್ಲ. ಕತ್ತಲೆಯ ರಸ್ತೆಗಳು ಕಳ್ಳತನ, ದರೋಡೆ, ಅತ್ಯಾಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಎಎಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್‌ ಸೆಹವಾನಿ, ಮುಖಂಡರಾದ ಪುಷ್ಪಾ ಕೇಶವ್‌, ಜೋತೀಶ್‌ ಕುಮಾರ್‌, ರಾಜಶೇಖರ್‌ ದೊಡ್ಡಣ್ಣ, ಶಶಾವಲ್ಲಿ, ಚನ್ನಪ್ಪ ಗೌಡ, ಉಮರ್‌ ಷರೀಫ್‌, ಗೋಪಿನಾಥ್ ಹಾಗೂ ಅನೇಕ ಕಾರ್ಯಕರ್ತರು ಈ ಮೇಣದ ಬತ್ತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು