ಸಕಲೇಶಪುರ: ವೋಟಿಗೋಸ್ಕರ ಪ್ರತಿಭಟನೆ ಮಾಡ್ಬೇಡಿ, ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವ ಕಾರ್ಯ ಮಾಡಿ ಎಂದು ಬಿಜೆಪಿ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವ ವಿಚಾರವಾಗಿ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಲ್ಲ ಪಾರ್ಟಿಯ ಸಂಸದರನ್ನು ಕರೆದು ಟ್ರಿಬ್ಯುನಲ್ ಕಮಿಟಿ ರಚಿಸಿ ಚರ್ಚೆ ಮಾಡಬೇಕು. ವಿವಾದವನ್ನು ರಸ್ತೆಗೆ ಎಳೆದು ತಂದು ಜಗಳ ಮಾಡಿಸುವುದಲ್ಲ ಎಂದು ಕಿಡಿಕಾರಿದರು.
ಇನ್ನು ನಮ್ಮ ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ ಎಂದು ಹಲವಾರು ಬಾರಿ ಸಂಸತ್ ಕಲಾಪದಲ್ಲೂ ಚರ್ಚೆ ಮಾಡಿದ್ದೇನೆ. ಈ ಬಗ್ಗೆ ಬಹಳ ಪ್ರಶ್ನೆಗಳನ್ನು ಕೇಳಿದ್ದೇನೆ. ಒಮ್ಮೆ ಅಣ್ಣಾಮಲೈಗೆ ಚಾಲೆಂಜ್ ಕೂಡ ಮಾಡಿದ್ದೆಎಂದರು.
ಇತ್ತ ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ನನಗೆ ಅರ್ಥ ಆಗ್ತಿಲ್ಲ. ನಾನು ಯಾವುದೇ ಪಕ್ಷ, ವ್ಯಕ್ತಿ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿಯವರ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.
ಮುಂದೆ ಎಂಪಿ ಚುನಾವಣೆ ಬರ್ತಿದೆ ಅನ್ನುವ ಕಾರಣಕ್ಕೆ ವೋಟಿಗೋಸ್ಕರ ಪ್ರತಿಭಟನೆ ಮಾಡಬಾರದು. ಒಂದು ಕಡೆ ಅಣ್ಣಾಮಲೈ ಅವರು ನಾನು ನೀರು ತಂದೆ ತರ್ತೀನಿ ಅಂತ ಟೇಬಲ್ ಕುಟ್ಟುತ್ತಾರೆ. ಇಲ್ಲಿ ಬಿಜೆಪಿಯವರು ನೀರು ಬಿಡಬೇಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾದರೆ, ಅಣ್ಣಾಮಲೈ ಯಾವ ಪಕ್ಷದಲ್ಲಿದ್ದಾರೆ, ಅವರ ನಿಲುವೇನು ಎಂದು ಪ್ರಶ್ನಿಸಿದ ಅವರು, ತಮಿಳುನಾಡು ಬಿಜೆಪಿ ಬೇರೆ, ಕರ್ನಾಟಕ ಬಿಜೆಪಿ ಬೇರೆ ಇದೆಯಾ ಎನ್ನುವುದನ್ನು ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)