ಕೊಪ್ಪಳ: 10 ವರ್ಷದ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿದ್ದು, ತೀವ್ರವಾಗಿ ಗಾಯಗೊಂಡಿರುವ ಆತ ನೆನಪಿನ ಶಕ್ತಿ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಮಿಲಾಪುರ ಗ್ರಾಮದಲ್ಲಿ ನಡೆದಿದೆ.
ಮಿಲಾಪುರ ಗ್ರಾಮದ ವೀರೇಶ್ ಗಾಯಗೊಂಡ ಬಾಲಕ. ಗುತ್ತಿಗೆದಾರ ಮಹದೇವಪ್ಪ ಎಂಬುವರು ಆರೋಪಿಯಾಗಿದ್ದು, ಈತನ ವಿರುದ್ದ ಪ್ರಕರಣ ದಾಖಲಿಸಿ ಕೊಂಡಿರುವುದಾಗಿ ಕಾರಟಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಕಳೆದ ವಾರ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶವಾಗಿತ್ತು. ಆಟದ ಮೈದಾನದಲ್ಲಿ ವಿದ್ಯುತ್ ತಂತಿಗಳು ಹರಡಿಕೊಂಡಿದ್ದು ಅದಕ್ಕೆ ಈ ಗುತ್ತಿಗೆದಾರನೆ ಕಾರಣ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮವಾಗಿ ವಿದ್ಯುತ್ ಬಳಸಿ ನೀರಿನ ಟ್ಯಾಂಕ್ ನಿರ್ಮಿಸುವ ವೇಳೆ ಆಟದ ಮೈದಾನದಲ್ಲಿ ಈ ಘಟನೆ ನಡೆದಿದೆ. ಗುತ್ತಿಗೆದಾರರು ವಿದ್ಯುತ್ ಕಂಬದಿಂದ ಅಕ್ರಮವಾಗಿ ಸಂಪರ್ಕ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಗಷ್ಟೇ ಅಲ್ಲದೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವಿದ್ಯುದಾಘಾತದ ನಂತರ ಜ್ಞಾಪಕ ಶಕ್ತಿಯನ್ನು ಕಳೆದುಕೊಂಡಿದ್ದಲ್ಲದೆ, ಬಾಲಕನ ಕೈಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ.
![](https://vijayapatha.in/wp-content/uploads/2024/02/QR-Code-VP-1-1-300x62.png)