ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡಿ ನಿನ್ನೆ (ಮಾ.17) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಆದೇಶ ಏಕಪಕ್ಷೀಯವಾಗಿದ್ದು ನಮಗೆ ಸರಿ ಸಮಾನ ವೇತನ ಕೊಡಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಇದೇ ಮಾ.24ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ವೇತನ ಸಂಬಂಧ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳೊಂದಿಗೆ ಕಳೆದ ಇದೇ ಮಾ.8ರಿಂದಲೂ ಹಲವಾರು ಸಭೆಗಳನ್ನು ಮಾಡಿದ್ದು, ಭಾರಿ ಚರ್ಚೆಕೂಡ ನಡೆಸಲಾಗಿದೆ. ಆದರೆ, ಈ ಕೆಎಸ್ಆರ್‌ಟಿಸಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ನಡುವೆ ಸಚಿವ ಶ್ರೀರಾಮುಲು ನಡೆಸಿದ ಎಲ್ಲ ಸಭೆಗಳು ವಿಫಲವಾಗಿವೆ.
ಹೀಗಾಗಿ ವೇತನ ಹೆಚ್ಚಳದ ಚೆಂಡು ಮುಖ್ಯಮಂತ್ರಿಗಳ ಅಂಗಳ ತಲುಪಿತ್ತು. ಸಿಎಂ ಬಸವರಾಜ ಬೊಮ್ಮಯಿ ಅವರು ಸಾರಿಗೆ ನೌಕರರ ಸಂಘಟನೆಗಳ ಜತೆ ಚರ್ಚಿಸದೆ ಏಕಪಕ್ಷೀಯವಾಗಿ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಶುಕ್ರವಾರ ರಾತ್ರಿ 8.30ರಲ್ಲಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಏಕಪಕ್ಷೀಯವಾಗಿದ್ದು ಇದನ್ನು ನಾವು ಒಪ್ಪಲ್ಲ, ನಮಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನವನ್ನು ವೇತನ ಆಯೋಗದ ಮಾದರಿ ನೀಡಬೇಕು ಎಂದು ಆಗ್ರಹಿಸಿ ನೌಕರರು ಮತ್ತು ಅವರ ಕುಟುಂಬ ಸಮೇತ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ಸಜ್ಜಾಗಿದ್ದಾರೆ.
ಮಾ.1ರಿಂದ ಬೇಡಿಕೆ ಈಡೇರಿಕೆಗೆಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ನೂರಾರು ನೌಕರರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಆ ವೇಳೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಮಾ.4ರಂದು ಧರಣಿ ಕೈ ಬಿಟ್ಟು, 15 ದಿನಗಳ ಬಳಿಕ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ಹಮ್ಮಿಕೊಳ್ಳುವುದಾಗಿ ನೌಕರರು ಎಚ್ಚರಿಕೆ ನೀಡಿದ್ದರು.
ಆ ವೇಳೆ ಸರ್ಕಾರವೇ ಕೊಟ್ಟಿರುವ ಲಿಖಿತ ಭರವಸೆಯನ್ನು ಈಡೇರಿಸುವಂತೆ ಹಾಗೂ ಸಮಸ್ಯೆಗಳ ಶಾಶ್ವತ ನಿವಾರಣೆಗಾಗಿ ನಾವು ಮಾ.8ರಂದು ಕಾರ್ಮಿಕ ಆಯುಕ್ತರಿಗೆ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ಮಾಡುವ ಬಗ್ಗೆ ನೋಟಿಸ್ ನೀಡಿ 14 ದಿನಗಳ ನಂತರ ಮುಷ್ಕರ ಪ್ರಾರಂಭಿಸಲು ಸಮಾನ ಮನಸ್ಕರ ವೇದಿಕೆ ನಿರ್ಧರಿಸಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್. ಚಂದ್ರಶೇಖರ್ ತಿಳಿಸಿದ್ದರು.
ಅದರಂತೆ ಈಗಾಗಲೇ ಕಾರ್ಮಿಕ ಇಲಾಖೆ ಆಯುಕ್ತರಿಗೆ ತಮ್ಮ ಬೇಡಿಕೆ ಈಡೇರಿಕೆ ಸಂಬಂಧ ನೋಟಿಸ್ ನೀಡಲಾಗಿದೆ. ಹೀಗಾಗಿ ನೌಕರರು ಮತ್ತು ಸಾರಿಗೆ ಅಧಿಕಾರಿಗಳ ರಾಜೀಸಂಧಾನ ಸಭೆಯನ್ನು ಇದೇ ಮಾ.20ರಂದು ಮಧ್ಯಾಹ್ನ 2.30ಕ್ಕೆ ಆಯೋಜನೆ ಮಾಡಲಾಗಿದೆ.
ಈ ನಡುವೆಯೇ ನಿನ್ನೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿರುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದು, ಇದನ್ನು ಸುತರಾಮ್ ಒಪ್ಪದ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಇಂದು (ಮಾ.18) ಮಧ್ಯಾಹ್ನ 1ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದು, ಈ ಸುದ್ದಿಗೋಷ್ಠಿಯಲ್ಲಿ ಮುಷ್ಕರ ಸಂಬಂಧ ಮಾಹಿತಿ ಹಂಚಿಕೊಳ್ಳಲಿದ್ದಾರೆ.