NEWSನಮ್ಮರಾಜ್ಯ

ಸಿಎಂ, ಸಾರಿಗೆ ಸಚಿವರಿಗೆ ಬಹಿರಂಗ ಪತ್ರ ಬರೆದ ನೊಂದ ನೌಕರರು : ಸಾರಿಗೆ ಸಂಘಟನೆಗಳ ಚುನಾವಣೆ ನಡೆಸಿ, ಅಧಿಕಾರಿಗಳ ಕಿರುಕುಳ ತಪ್ಪಿಸಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ಸಾರಿಗೆಯ 4 ನಿಗಮಗಳ 1.30 ಲಕ್ಷ ಸಾರಿಗೆ ನೌಕರರಾದ ನಾವು ಮುಷ್ಕರದ ಸಮಯದಲ್ಲಿ ಆಡಳಿತಾತ್ಮಕ ಕಾರಣದಿಂದ ದೂರದ ವಿಭಾಗ ಘಟಕಗಳಿಗೆ ವರ್ಗಾವಣೆ ಮಾಡಿ ಆಡಳಿತ ವರ್ಗ ಆದೇಶ ಹೊರಡಿಸಿತ್ತು.

ತಮ್ಮ ದೊಡ್ಡ ಮನಸ್ಸಿನಿಂದ ಯಥಾವತ್ತಾಗಿ ವರ್ಗಾವಣೆಯಾದ ನೌಕರರನ್ನು (ಮುಷ್ಕರಕ್ಕಿಂತ ಹಿಂದೆ) ಕರ್ತವ್ಯ ನಿರ್ವಹಿಸುತ್ತಿರುವ ವಿಭಾಗ ಮತ್ತು ಅದೇ ಘಟಕದಲ್ಲಿ ಕರ್ತವ್ಯದ ಮೇಲೆ ನಿಯೋಜನೆ ಮಾಡಿ, ನೌಕರರ ಕಡೆಯಿಂದ ಉತ್ತಮ ಬಾಂಧವ್ಯ ಬೆಳಸಿಕೊಂಡು ದಿವಾಳಿಯತ್ತ ಸಾಗುತ್ತಿರುವ ಸಾರಿಗೆ ಸಂಸ್ಥೆಯನ್ನು ಅಭಿವೃದ್ಧಿಪಡಿಸಿ. ಅದಕ್ಕೆ ನೌಕರರ ಪಾತ್ರ ಅತಿ ಮುಖ್ಯ ಎಂದು ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಿದ್ದೀರಿ.

ಆದರೂ ಸಹ ನಾಯಿ ಬಾಲ ಡೊಂಕು ಎನ್ನುವ ರೀತಿಯಲ್ಲಿ ವರ್ಗಾವಣೆ ಆದ ನೌಕರರನ್ನು ಅದೇ ವಿಭಾಗಕ್ಕೆ ನೀಡಿ ಬೇರೆ ಬೇರೆ ಘಟಕಗಳಿಗೆ ನಿಯೋಜನೆ ಮಾಡಿ ಹೆಚ್ಚಿನ ಕಿರುಕುಳ ನೀಡಲು ಮುಂದಾಗಿರುವ ಅಧಿಕಾರಿಗಳು, ನಿಮ್ಮ ಮಾತನ್ನೇ ಉಲ್ಲಂಘಿಸುತ್ತಿದ್ದಾರೆ.

ಅಂದರೆ, ಈವರೆಗೂ ಕೋರಿಕೆ ಮೇರೆಗೆ ಅನ್ನುವುದನ್ನು ತಿದ್ದುಪಡಿ ಮಾಡಿ ಆಡಳಿತಾತ್ಮಕ ಎಂದು ಈ ಹಿಂದಿನಂತೆ ಯಥಾವತ್ತಾಗಿ ಆದೇಶ ಮಾಡಲು ಮೀನಮೇಷ ಎಣಿಸುತ್ತಿರುವ ಅಧಿಕಾರಿಗಳ ಬಗ್ಗೆ ತಾವು ಹೆಚ್ಚಿನ ಗಮನ ನೀಡಬೇಕಾಗಿದೆ.

ಮುಷ್ಕರದ ಸಮಯದಲ್ಲಿ ಸರಿಯಾದ ವೇತನ ಇಲ್ಲದೇ ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ ಕಟ್ಟಲಾಗದೆ, ಮನೆಗೆ ರೇಷನ್ ತಂದುಕೊಳ್ಳಲು ಪರದಾಡುತ್ತಿದ್ದರೂ ಮುಷ್ಕರದ ಅವಧಿಯಲ್ಲಿ ಗೈರು ಹಾಜರಿ ತೋರಿಸಿ 22 ಮತ್ತು 23 ರಡಿ ಆರೋಪಣಾ ಪತ್ರ ನೀಡಿ ಪ್ರತಿಯೊಬ್ಬ ನೌಕರರಿಂದ 5 ಸಾವಿರ ರೂ.ಗಳಿಂದ 10 ಸಾವಿರ ರೂ. ವರೆಗೆ ದಂಡ ಹಾಕಿ ವೇತನದಲ್ಲಿ ಕಡಿತ ಮಾಡುತ್ತಿದ್ದಾರೆ.

ಹೀಗಾಗಿ ಈಗಾಗಲೇ ವೇತನದಲ್ಲಿ ಮುರಿದುಕೊಳ್ಳುತ್ತಿರುವ ಈ ದಂಡದ ಹಣವನ್ನು ಎಲ್ಲ ನೌಕರರಿಗೂ ಮರಳಿಸುವಂತೆ ಆದೇಶ ಹೊರಡಿಸಿ. ಪೊಲೀಸ್‌ ಕೇಸ್‌ಗಳನ್ನು ವಾಪಸ್ ಪಡೆಯುವಂತೆ ಆದೇಶ ಮಾಡಲು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿ. ಈ ಆದೇಶದ ಜೊತೆಗೆ ಯಥಾಸ್ಥಿತಿ  ಅಂದರೆ ಏ.6ರಂತೆ ಇದ್ದ ಆದೇಶಕ್ಕಾಗಿ ಎದುರು ನೋಡುತ್ತಿದ್ದೇವೆ.

ಇನ್ನು ತಮ್ಮನ್ನು ಸಾರಿಗೆ ಸಚಿವರಾಗಿ ನೇಮಿಸಿದ ಮುಖ್ಯಮಂತ್ರಿಯವರಿಗೂ ಹಾಗೂ ನಮ್ಮ ಸಾರಿಗೆಯನ್ನು ಅಭಿವೃದ್ಧಿ ಪಡಿಸುತ್ತೇನೆಂದು ಶತಾಯ ಗತಾಯ  ಶ್ರಮಿಸುತ್ತಿರುವ  ಮತ್ತು ಕೊಟ್ಟಿರುವ ಸಾರಿಗೆ ಖಾತೆಯನ್ನು ಸಂತೋಷದಿಂದ ಸ್ವೀಕರಿಸಿದ ( ಶ್ರೀರಾಮುಲು) ನಿಮ್ಮ ಮಾತಿಗೂ ಕಿಮ್ಮತ್ತು ನೀಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಕೆಲ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುವಿರೆಂದು ನಂಬುತ್ತೇವೆ.

ಇದರ ಜತೆಗೆ ಯೂನಿಯನ್ ಚುನಾವಣೆ ನಡೆಸಲೇ ಬೇಕು ಎಂದು ಎಲ್ಲ 1.30 ಲಕ್ಷ ನೌಕರರು ಪಟ್ಟು ಹಿಡಿದಿದ್ದು ಆದಷ್ಟು ಬೇಗ ಚುನಾವಣೆ ನಡೆಸಿಕೊಡಲು ಮನವಿ ಮಾಡುತ್ತಿದ್ದೇವೆ.

ಈ ಚುನಾವಣೆ ನಡೆದರೆ ನಾವು ನೌಕರರ ಪರ ಎಂದು ಹೇಳಿಕೊಳ್ಳುವ ಗೋಮುಖ ವ್ಯಾಘ್ರಗಳನ್ನು ದೂರವಿಡಲು ಸಾಧ್ಯವಾಗುತ್ತದೆ ಎಂದು ನಂಬಿದ್ದೇವೆ.

ಇನ್ನು ವಜಾ, ವರ್ಗಾವಣೆ, ಅಮಾನತು, ಪೊಲೀಸ್ ಕೇಸ್‌ಗಳು ಆಗಿರುವ ಸಾವಿರಾರು ನೌಕರರಿಗೆ ಮನಮುಟ್ಟುವಂತೆ ತಿಳಿಸಿ ಧೈರ್ಯ ತುಂಬುತ್ತಿರುವ ಸಾರಿಗೆ ಸಚಿವರಾದ ಬಿ. ಶ್ರೀರಾಮುಲು ಅಣ್ಣನವರಿಗೆ ನಮ್ಮ 4 ನಿಗಮಗಳ ನೌಕರರ ಪರವಾಗಿ ಅನಂತ ಅನಂತ ಧನ್ಯವಾದಗಳು. ತಾವು ದಯವಿಟ್ಟು ಎಲ್ಲ ವಿಭಾಗಗಳಿಗೂ ಯಥಾವತ್ತಾಗಿ ಆದೇಶ ನೀಡಿ ನೌಕರರಿಗೆ ಸರಿಪಡಿಸಿಕೊಡಬೇಕೆಂದು ಮತ್ತೊಮ್ಮೆ ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇವೆ.

– ಎಲ್ಲ ಸಾರಿಗೆ ನೌಕರರ ಪರವಾಗಿ ಟಿ.ಎ. ದ್ಯಾವಪ್ಪ, ಚಾಲಕ ಕಂ ನಿರ್ವಾಹಕ, ಬೆಂ.ಕೇಂ. ವಿಭಾಗ 

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು