NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಮಕ್ಕಳ ತಳಮಳ – “ಪಪ್ಪಾ.. ನೀ ಯಾವಾಗ್ ಬರ್ತಿ..?! ಎಲ್ಲಿ ಅದೀ..!”

ವಿಜಯಪಥ ಸಮಗ್ರ ಸುದ್ದಿ
  • ಬಳ್ಳಾರಿ ಬಸ್ ಸ್ಟ್ಯಾಂಡ್ ನಲ್ಲಿ ಒಂದು ರಾತ್ರಿ.. ಇದು ರಾಜ್ಯದ ಸಾರಿಗೆ ಸಚಿವರ ತವರು‌ ಜಿಲ್ಲೆ..
  • ಸುದೈವವೋ?! ದುರ್ದೈವವೋ?!.. ಅವರೇ ಜಿಲ್ಲಾ ಉಸ್ತುವಾರಿ ಮಂತ್ರಿಯೂ! ಭಾಗ್ಯ ನೋಡಿ..

ಧಾರವಾಡದವರಿಗೆ ಕೊಪಣಾಚಲದವರು ಉಸ್ತುವಾರಿ..! ಧನ್ಯ. ಗವಿಸಿದ್ದೇಶನೇ ನಮ್ಮ ಕಾಯುತ್ತಿದ್ದಾನೆ.. ನಾವು ಮನವಿ ಪಿಡಿದು ಕೊಪ್ಪಳದ ಬಸ್ ಹತ್ತಬೇಕು..! ಅದಿರ್ಲಿ.

ಇಡೀ‌ ದಿನ‌ ದೂರದ ಊರುಗಳಿಂದ ಬಸ್ ಓಡಿಸಿಕೊಂಡು ಬಂದ ಡ್ರೈವರ್ ಮತ್ತು ಕಂಡಕ್ಟರ್ ಗಳು, ಉಗುಳು, ಗುಟಿಖಾ ಚಿತ್ತಾರ, ಕಸ, ಉಚ್ಚೆ ಮತ್ತು ಗಟಾರು ನೀರಿನ‌ ಮಧ್ಯೆ ಹೀಗೆ ಮಲಗಿ ರಾತ್ರಿ ಕಳೆಯುತ್ತಾರೆ. ಬೆಳ್ಳಂಬೆಳಗ್ಗೆ ಮತ್ತೆ ಮರು ಪ್ರವಾಸ ಆರಂಭ..

“ನಿಮ್ಮ‌ ಪ್ರಯಾಣ ಸುಖಕರವಾಗಿರಲಿ..” ಅಂತ ಬೋರ್ಡ್ ಬೇರೆ.. ನಮಗಾಗಿ.. ಹೊಟ್ಟೆ ತೊಳೆಸಿದಂತಾಯ್ತು.. ನನಗೆ..

ಭಯಂಕರ ಸೆಕೆ. ಸೊಳ್ಳೆಗಳು. ಚಿಕ್ಕಾಡು. ನೊಣ.. ಟಾವೆಲ್ ಬೀಸುತ್ತ, ಸೊಳ್ಳೆ ಓಡಿಸುವ ಬತ್ತಿ‌ ಹಚ್ಚಿಟ್ಟುಕೊಂಡು ಮಧ್ಯರಾತ್ರಿಯಲ್ಲಿ ಸೊಳ್ಳೆ ಪರದೆಯಲ್ಲಿ‌ ಕುಳಿತು, ಮನೆಯಿಂದ ತಂದ ಆರಿದ ಬುತ್ತಿ‌ ಬಿಚ್ಚಿ ಉಣ್ಣುವುದನ್ನು ನೋಡಿ, ನನಗಂತೂ ಅಸಹನೀಯ ವೇದನೆ ಎನಿಸಿತು..

ಇಡೀ ಬಸ್ ಸ್ಟ್ಯಾಂಡ್ ನಲ್ಲಿ ಮೇಲ್ ಮಾಳಿಗೆ ಕಟ್ಟಿಸಿ, ೧೦ ಬೆಡ್, ಕಾಟ್ ಹಾಸಿಟ್ಟರೆ, ಫ್ಯಾನ್, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ, ನೌಕರಿ ಮನಸ್ಸುಗೊಟ್ಟು ಮಾಡಬಹುದು. ಆರೋಗ್ಯ ಕಾಪಾಡಿಕೊಳ್ಳಬಹುದು.‌ ಚಿತ್ತ‌ ವಿಕಾರದಿಂದ ತಪ್ಪಿಸಿಕೊಳ್ಳಬಹುದು..‌

ನೂರಾರು ಜೀವಗಳನ್ನು ಸುರಕ್ಷಿತವಾಗಿ ಗಮ್ಯಕ್ಕೆ ತಲುಪಿಸಬೇಕಾದ ಜವಾಬ್ದಾರಿ ಇರುವ ಚಾಲಕ, ನಿರ್ವಾಹಕರು ೫-೬ ತಾಸಿನ ನೆಮ್ಮದಿಯ ನಿದ್ರೆಯಿಂದ ಎದ್ದರೆ.. ಎಲ್ಲರ ಬದುಕೂ ಸಹ್ಯ.. ಸುರಕ್ಷಿತ.‌

ನೀವೇ ನೋಡಿ, ಸಾರಿಗೆ‌ ನಿಯಂತ್ರಣಾಧಿಕಾರಿ ಕುರ್ಚಿಗೆ ಒಂದು ಬದಿಯ ಮಚ್ಚರ ದಾನಿಯ ತುದಿ ಬಿಗಿದಿದ್ದರೆ, ಇನ್ನೊಂದು ತುದಿ ಕಂಬಕ್ಕೆ.. ಜಾರಿ ಬೀಳುತ್ತಿತ್ತು.. ಆಗಾಗ, ಎಚ್ಚರ ಇದ್ದವರು ಮತ್ತೆ ಮೇಲಕ್ಕೆ ಏರಿಸಿ, ಮತ್ತೆ ಒಳಗೆ ತೂರಿಕೊಳ್ಳುತ್ತಿದ್ದರು..

ರಾತ್ರಿ ಒಂದು ಗಂಟೆಯ ಸಮಯ. ಶಿವಮೊಗ್ಗದ ಎರಡು ಬಸ್ ಗಳ ಸಿಬ್ಬಂದಿ ಇವರು.‌ ಓರ್ವ ಚಾಲಕರಿಗೆ ಮಗಳ ವಿಡಿಯೋ ಕಾಲ್.. ಅಷ್ಟೊತ್ತಿಗೆ!

“ಪಪ್ಪಾ.. ನೀ ಯಾವಾಗ್ ಬರ್ತಿ..?! ಎಲ್ಲಿ ಅದೀ..!” ಅಪ್ಪ ಮಲಗಿದಲ್ಲಿಂದ ಉತ್ತರಿಸಿದರು.. “ಅವ್ವ.. ನಾಳೆ ಮಧ್ಯಾಹ್ನದೊಳಗ ಬರ್ತೀನಿ.. ಏನ್ ತರ್ಲೀ.. ನಿನಗ..?!” ಮಗಳು ಅಂದ್ಲು.. “ನನಗೇನೂ ಬ್ಯಾಡ ಅಪ್ಪ.. ನೀ ಲೊಗೂ ಬಾ.. ಹುಷಾರು.”

ಕರ್ನೂಲ್ – ಬೆಳಗಾವಿ ಹವಾ ನಿಯಂತ್ರಿತ ಬಸ್ ಹತ್ತಲು 11 ಗಂಟೆಗೆ ಬಸ್ ನಿಲ್ದಾಣ ತಲುಪಿದ್ದೆ. 11.45ಕ್ಕೆ ಬಸ್ ಬಳ್ಳಾರಿ ನಿಲ್ದಾಣ ತಲುಪಬೇಕಿತ್ತು.. ಮಧ್ಯರಾತ್ರಿ 1 ಗಂಟೆಗೆ ಬಂತು.. ಅಲ್ಲಿಯ ತನಕ ರಾತ್ರಿ ಬದುಕು ನನ್ನ ಮುಂದೆ ಅನಾವರಣಗೊಳ್ಳುತ್ತಿತ್ತು..

ಈ‌ ನೆನಪುಗಳ ಮೆರವಣಿಗೆ ಮಧ್ಯೆ, ಮೊಸರಿನಲ್ಲಿ ಕಲ್ಲು ಬಂದಂತಾಯ್ತು.. ಅಸಂಖ್ಯ ಸೊಳ್ಳೆಗಳ ಕಡಿತದ ಮಧ್ಯೆ, ಓರ್ವ ನಿರಾಶ್ರಿತ ಹಿರಿಯರು (ಭಿಕ್ಷುಕ) ಹಚ್ಚಿಟ್ಟು, ಮಲಗಿದ್ದ ಮಾಸ್ಕಿಟೋ ಕಾಯಿಲ್ ಪಕ್ಕ ಕುಳಿತು… ಗಮನಿಸಿದೆ..

ದಯವಿಟ್ಟು ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿ ವೃಂದ, ಸ್ಥಳೀಯ ಶಾಸಕರು, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಯವರು, ಸಾರಿಗೆ ಖಾತೆ ಮಂತ್ರಿಯವರು, ತುರ್ತಾಗಿ ಗಮನಹರಿಸಿ, ಪ್ರಯಾಣಿಕರ ಸುರಕ್ಷತೆಯ‌ ದೃಷ್ಟಿಯಿಂದಾದರೂ ತಮ್ಮ ಸಿಬ್ಬಂದಿಯ ಹಿತ ಕಾಯುವ ಪ್ರಯತ್ನ ಮಾಡಲಿ ಎಂಬ ಆಗ್ರಹ..

ಇದು ಆಡಳಿತದ ಚುಕ್ಕಾಣಿ ಹಿಡಿದವರಿಗೆ ಗೊತ್ತೇ ಇಲ್ಲ! ಅಂತಲ್ಲ. ಜಾಣ ಗುರುಡು-ಜಾಣ ಕಿವುಡು. ಹೇಗೂ ನಡೆದಿದೆ, ನಿಂತಾಗ ತಲೆ ಕೆಡಿಸಿಕೊಳ್ಳುವ ಜಾಯಮಾನ‌ ರಕ್ತಗತವಾಗಿದೆ ವ್ಯವಸ್ಥೆಗೆ..

ಒಂದು ಬಾರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಚಿವರನ್ನು ಇಲ್ಲಿ, ಹೀಗೆ ಮಲಗಿಸುವ ಮನಸ್ಸು, ಇರಾದೆ ನನ್ನದು.. ಕಾರಣ, ಕರುಳರಿಯದ ಸಂಗತಿಗಳನ್ನು ಕಣ್ಣು ಗುರುತಿಸುವುದಿಲ್ಲ .. ಅಂತ ಹಿರಿಯರು ಹೇಳುತ್ತಿದ್ದ ಮಾತು ನನಗೆ ಇಲ್ಲಿ ಸಾಂದರ್ಭಿಕ ಎನಿಸಿತು..

ಅಯ್ಯೋ ಪಾಪ.. ಎನಿಸಿತು. ಕಣ್ಣು ಹನಿ ಹೂಡಿದವು. ಎರಡು ತಾಸಿನಲ್ಲಿ ನನಗೆ ನರಕದ ಸಾಕ್ಷಾತ್ ದರುಶನವಾಯ್ತು.. ನಿತ್ಯ ಹೀಗೆ ಅನಾವಶ್ಯಕ ಸವೆಯುವ ಸಾರಿಗೆ ಸಿಬ್ಬಂದಿಯ ತಾಳ್ಮೆ, ಶಾಪ ಮತ್ತು ಅಸಹಾಯಕತೆ, ಎಲ್ಲರ ಕಣ್ಣು ತೆರೆಸಲಿ..

ಸೌಲಭ್ಯ ಒದಗಿಸಿದ್ದಕ್ಕೆ, ಭತ್ಯೆಗೆ ಪ್ರಾವಧಾನ ಕಲ್ಪಿಸಿ, ಸಿಬ್ಬಂದಿಯ ಸಂಬಳದಿಂದ ಕತ್ತರಿಸಿ, ವ್ಯವಸ್ಥೆ ನಿರ್ವಹಿಸಲಿ.‌ “ನಿನ್ನ ಹಣೆ ಬರೆಹ..” ಅಂತ ಷರಾ ಬರೆದು, ಪಡಿಪಾಟಲಿಗೆ ನೂಕಿ, ಕುಟುಂಬವೊಂದರ ಆಧಾರ, ಸಂಸ್ಥೆಯ ಬೆನ್ನೆಲುಬಾದ ದುಡಿಯುವ ಕೈಗಳನ್ನು ಹೀಗೆ ಅತಂತ್ರ ಮಾಡಿ.. ಸುಖದ ನಿದ್ರೆ ತೆಗೆಯುತ್ತಿರುವವರು ಮನುಷ್ಯರೇ? ಅವರಿಗೆ ಸಾರ್ವಜನಿಕವಾಗಿ ನಾಗರಿಕ ಸನ್ಮಾನ ಮಾಡಬೇಕು!

ಕಟ್ಟಿ, ಒಸರುವ ಮೂತ್ರಾಲಯ, ಬಸ್ ನಿಲ್ದಾಣದ ಕಂಪೌಂಡ್ ಗುಂಟ ಮಲ-ಮೂತ್ರ ವಿಸರ್ಜನೆ (₹5-₹10 ನೀಡಲಾಗದ ಬಡವರೂ ಇದ್ದಾರೆ..), ವೇಶ್ಯಾವಾಟಿಕೆ, ಕುಡುಕರ ಹಾವಳಿ, ಮುಂಗೈ ಜೋರಿನ ದಾದಾಗಳ ರಾತ್ರಿ‌ ಆಟಾಟೋಪ.. ಓರ್ವ ಪೊಲೀಸ್ ಸಿಬ್ಬಂದಿಯೂ ನಾನಿದ್ದ 3 ಗಂಟೆ ಕಾಣಿಸಲಿಲ್ಲ!

ಅಲ್ಲೇ, ಕಾಯ್ದು ಕೆಂಡವಾದ ಬಸ್ ನಿಲ್ದಾಣದ ಫುಟ್ ಪಾತ್ ಮೇಲೆ ಮಗ್ಗಲು ಹೊರಳಿಸುತ್ತಿದ್ದರು.. ಸಿಬ್ಬಂದಿ.. ಬುಡದಲ್ಲಿ, ಬಿಸಾಡಿದ್ದ ನೀರಿನ ಬಾಟಲಿಗಳ ಪ್ಯಾಕ್ಡ್ ಡಬ್ಬಿ‌ ಗಾದಿಯಾಗಿತ್ತು.. ಹೊದ್ದುಕೊಳ್ಳಲೂ ಸಾಧ್ಯವಿರಲಿಲ್ಲ.. ಬನಿಯನ್ ಮತ್ತು ಅಂಡರ್ ವೇರ್..‌ ಟಾವೆಲ್ ಬೀಸಿಕೊಳ್ಳುತ್ತ ಏದುಸಿರು, ನಿಟ್ಟುಸಿರು.. ಎಲ್ಲ..

ಬೆಳಗ್ಗೆ ಬಸ್ ಏರುವ ನನ್ನಂತಹ ಪ್ರಯಾಣಿಕರು, ಕನಿಷ್ಠ ಚಿಲ್ಲರೆ ಕೂಡ ಇಟ್ಟು ಕೊಳ್ಳದೇ ಹತ್ತಿ, ಸಣ್ಣ-ಪುಟ್ಟ ವಿಷಯಕ್ಕೆ ಸುಬ್ಬಂದಿಯ ಜೀವ ಅರೆಯುತ್ತೇವೆ.. ನಮ್ಮ ನಮ್ಮ ಶಕ್ತ್ಯಾನುಸಾರ!

ಅವರಿಗೂ ಸಿಟ್ಟು ಮಾಡಿಕೊಳ್ಳಲು ಸಾವಿರಾರು ಕಾರಣಗಳಿವೆ.. ಬದುಕಿನ ಅನಿವಾರ್ಯತೆ ಬಗ್ಗಿಸಿದೆ, ಬಾಡಿಸಿದೆ. ಬಾಳಿಸುವಂತಾಗಲು ಸಂಘ-ಸಂಸ್ಥೆಗಳೂ ಕೈ ಜೋಡಿಸಿ, ಮೂಲ ಸೌಲಭ್ಯವಾದರೂ ಈ ಅಸಹಾಯಕ, ಧ್ವನಿಯೇ ಉಡುಗಿದ ಸಿಬ್ಬಂದಿಗೆ ಒದಗಿಸಿ, ನೆರವಾಗಬೇಕಿದೆ.. ಆದಷ್ಟು ಬೇಗ. ಈ ಕಂತಿನ ಸಾವು ತಪ್ಪಬೇಕಿದೆ.. ನೌಕರಿ ಸಹ್ಯವಾಗಬೇಕಿದೆ.

ನನ್ನ ಅಣ್ಣ, ತಮ್ಮ, ತಂಗಿ, ಹೆಂಡತಿ ಅಥವಾ ಅಪ್ಪ, ಚಿಕ್ಕಪ್ಪ, ಮಾವ.. ಸ್ವತಃ ನಾವೇ.. ಹೀಗೆ ಮಲಗಿದರೆ ನಮ್ಮ ಪ್ರತಿಕ್ರಿಯೆ ಏನು?! ಹೇಗಿರಬಹುದು?!

ಕೇಳಿ.. ಒಂದು ಬಾರಿ, ಇವರ ಪರವಾಗಿ ನೀವು ಆರಿಸಿದ ಮಹಾನುಭಾವರಿಗೆ.. ಐ.ಎ.ಎಸ್. ಪಾಸು ಮಾಡಿದವರಿಗೆ.. ಕೆ.ಎ‌.ಎಸ್. ಸಾಧಿಸಿದವರಿಗೆ… ಮ್ಯಾನೇಜ್ಮೆಂಟ್ ಕಲಿತವರಿಗೆ.. ಗಣಿ ಹೆಕ್ಕಿದವರಿಗೆ.. ದುಡ್ಡಿನ‌ ಧಣಿಗಳಿಗೆ..

ನಾನಂತೂ ತಲೆ ತಗ್ಗಿಸಿದೆ.‌. ನಾಚಿಕೆಯಾಗಬೇಕು..

ನಾಗರಿಕ ಸಮಾಜವೇ ಇದು.. ?! 

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು