ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಸಂಘಟನೆಗಳ ಚುನಾವಣೆ ನಿಗದಿತ ಸಮಯದಲ್ಲಿ ನಡೆಸುವ ಆದೇಶದ ಪ್ರತಿಯನ್ನು ಇದೇ ಮಾ.23ರ ಒಳಗೆ ನೀಡಬೇಕು ಒಂದು ವೇಳೆ ಕೊಡದಿದ್ದರೆ ಮಾ.24ಕ್ಕೆ ಕರೆ ನೀಡಿರುವ ಸಾರಿಗೆ ನೌಕರರ ಮುಷ್ಕರ ಮಾಡುವುದು ಖಚಿತ ಎಂದು ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಕಾರ್ಮಿಕ ಆಯುಕ್ತರು, ಸಾರಿಗೆ ಆಡಳಿತ ಮಂಡಳಿ ಮತ್ತು ಸಮಾನ ಮನಸ್ಕರ ವೇದಿಕೆ ಜತೆಯಲ್ಲಿ ನಡೆದ ಚರ್ಚೆಯಲ್ಲಿ ಸಂಘದ ಪಧಾದಿಕಾರಿಗಳು 1) ಕಾರ್ಮಿಕ ಸಂಘಟನೆಗಳ ಚುನಾವಣೆ ನಿಗದಿತ ಸಮಯದಲ್ಲಿ ನಡೆಸುವ ಆದೇಶವನ್ನು 23-03-2023ರ ಬೆಳಗ್ಗೆ 10.30ರ ಒಳಗೆ ನೀಡಬೇಕು.
2) ಪೊಲೀಸ್ ಕೇಸ್ ನೆಪನೀಡಿ ಕರ್ತವ್ಯ ನೀಡದಿರುವ ನೌಕರರಿಗೆ ಪುನರ್ ನೇಮಕ ಮಾಡಿಕೊಂಡು ಡ್ಯೂಟಿ ಕೊಡಬೇಕು.
3) ಸರ್ಕಾರ ಕೊಟ್ಟ ಲಿಖಿತ ಹೇಳಿಕೆಯಂತೆ ವೇತನ ಆಯೋಗ ಮಾದರಿ ಅಥವಾ ಸರಿಸಮಾನ ವೇತನ ನೀಡಬೇಕು ಎಂಬ ಈ ಮೂರು ಒತ್ತಾಯಗಳನ್ನು ಸಭೆಯಲ್ಲಿ ಮಂಡಿಸಿದರು.
![](https://vijayapatha.in/wp-content/uploads/2023/03/20-Mar-samana-Labour-Commissioner-300x172.jpg)
ಈ ವೇಳೆ ಕಾರ್ಮಿಕ ಇಲಾಖೆಯ ಆಯುಕ್ತರು ನಿಗಮದ ಆಡಳಿತ ಮಂಡಳಿಗೆ ಪೊಲೀಸ್ ಕೇಸ್ ಇರುವ ನೌಕರರನ್ನು ಒಳಗೊಂಡಂತೆ ಎಲ್ಲರಿಗೂ ಮಾನವೀಯ ನೆಲೆಗಟ್ಟಿನ ಮೇಲೆ ಕರ್ತವ್ಯಕ್ಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಮುಂದುವರಿದು ಕಾನೂನು ರೀತಿಯಲ್ಲಿ ಚುನಾವಣೆಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ ಅವರು, ವೇತನಕ್ಕೆ ಸಂಬಂಧಿಸಿದಂತೆ ಸೌಹಾರ್ದ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಸಮಯಾವಕಾಶವನ್ನು ನೀಡಿ, ಮುಂದಿನ ವಿಚಾರಣೆಯನ್ನು 6-04-2023ಕ್ಕೆ ಮುಂದೂಡಿದರು.
ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಮಾ.24ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಮಿಕ ಇಲಾಖೆಯ ಆಯುಕ್ತರು ಸಂಧಾನ ಸಭೆ ಆಯೋಜಿಸಿದ್ದರು.
ನೌಕರರ ವೇತವ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು ಮಾ.24ರಂದು ಮುಷ್ಕರ ನಡೆಸುತ್ತಿರುವುದಾಗಿ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ ಅವರು 08.03.2023ರಂದು ಮುಷ್ಕರ ನೋಟಿಸ್ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಆಡಳಿತವರ್ಗ ಮತ್ತು ಕಾರ್ಮಿಕ ಸಂಘದವರ ನಡುವೆ ಕೈಗಾರಿಕಾ ವಿವಾದ ಉದ್ಭವಿಸಿದೆ ಎಂದು ಪರಿಗಣಿಸಿ, 20.03.2023 ರಂದು ಅಪರಾಹ್ನ 02.30 ಗಂಟೆಗೆ ರಾಜೀ ಸಂಧಾನ ಸಭೆಯನ್ನು ನಿಗದಿಪಡಿಸಿದ್ದು, ಈ ಸಂಧಾನ ಸಭೆಯಲ್ಲಿ ಆಡಳಿತವರ್ಗ ಮತ್ತು ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಬಳಿಕ ಸಭೆ ಸೇರಿದ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಸಂಘಟನೆಗಳ ಚುನಾವಣೆ ನಿಗದಿತ ಸಮಯದಲ್ಲಿ ನಡೆಸುವ ಆದೇಶ ಪ್ರತಿ ನೀಡದಿದ್ದರೆ ಮಾ.24ರಿಂದ ಮುಷ್ಕರ ಮಾಡುವ ಬಗ್ಗೆ ತೀರ್ಮಾನಿಸಿರುವುದಾಗಿ ತಾಳಶಾಸನ ಮೋಹನ್ ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)