ನ್ಯೂಡೆಲ್ಲಿ: ವಿಶ್ವ ಹೆಮ್ಮಾರಿ ಕೊರೊನಾ ವೈರಸ್ ಭೀತಿಯ ನಡುವೆಯೂ 2020-21ರ ಸಾಲಿಗೆ ಹೊಸ ಆರ್ಥಿಕ ವರ್ಷ ಆರಂಭಗೊಂಡಿದೆ.
ಸಿಂಡಿಕೇಟ್, ಕಾರ್ಪೊರೇಷನ್ ಬ್ಯಾಂಕ್ ಸೇರಿದಂತೆ ಸಾರ್ವಜನಿಕ ವಲಯದ 10 ಬ್ಯಾಂಕ್‌ಗಳ ವಿಲೀನ 2020ರ ಏಪ್ರಿಲ್ 1ರಿಂದ ಜಾರಿಯಾಗುತ್ತಿದೆ. ಇದರಿಂದ ಒಟ್ಟು 6 ದೊಡ್ಡ ಬ್ಯಾಂಕ್‌ಗಳು ಹೊರಹೊಮ್ಮಿದಂತಾಗಲಿದೆ.
ಇಂದಿನಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ವೈಯಕ್ತಿಕ ಆದಾಯ ತೆರಿಗೆಯ ಹೊಸ ಸ್ಲ್ಯಾಬ್ ಅಡಿಯಲಿ ಬರಲಿದೆ. ಜೊತೆಗೆ, ಈ ಹಿಂದೆ ಘೋಷಿಸಲಾದ ಬ್ಯಾಂಕ್ ವಿಲೀನ ಇಂದಿನಿಂದ ಅಧಿಕೃತವಾಗಲಿದೆ.
ಕೇಂದ್ರದ ಮೊದಲ ಪ್ರಯತ್ನದಲ್ಲಿ ಎಸ್‌ಬಿಐ ಹಾಗೂ ಅದರ ಸಹವರ್ತ ಬ್ಯಾಂಕ್‌ಗಳ ವಿಲೀನ ಮಾಡಲಾಯಿತು. ನಂತರ ಎರಡನೇ ಪ್ರಯತ್ನದಲ್ಲಿ, ಬ್ಯಾಂಕ್ ಆಫ್ ಬರೋಡಾ, ದೇನಾ ಮತ್ತು ವಿಜಯಾ ಬ್ಯಾಂಕ್‌ಗಳನ್ನು ವಿಲೀನಗೊಳಿಸಿತ್ತು. ಇದೀಗ ಮೂರನೇ ಹಂತದಲ್ಲಿ ದೇಶದ ಪ್ರಮುಖ ಹತ್ತು ಬ್ಯಾಂಕುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.
2019ರ ಆಗಸ್ಟ್‌ನಲ್ಲಿ ಘೋಷಣೆಯಾಗಿದ್ದ ಈ ವಿಲೀನದ ಪರಿಣಾಮ 2017ರಲ್ಲಿ 27ರಷ್ಟಿದ್ದ ಸಾರ್ವಜನಿಕ ಬ್ಯಾಂಕ್‌ಗಳ ಸಂಖ್ಯೆ 12ಕ್ಕೆ ಇಳಿಯುತ್ತಿದೆ.
ಕೆನರಾ ಬ್ಯಾಂಕ್ ದೇಶದ 4ನೇ ಅತಿ ದೊಡ್ಡ ಬ್ಯಾಂಕ್
ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಜತೆಗೆ ವಿಲೀನವಾಗಲಿದೆ. ಇದರೊಂದಿಗೆ ಕೆನರಾ ಬ್ಯಾಂಕ್ ದೇಶದ 4ನೇ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎನ್ನಿಸಲಿದೆ. ಇಂಡಿಯನ್ ಬ್ಯಾಂಕ್ ಅಲಹಾಬಾದ್ ಬ್ಯಾಂಕ್ ಜತೆ ವಿಲೀನವಾಗಲಿದೆ. 2020ರ ಏಪ್ರಿಲ್ 1ರಿಂದ ಕೆನರಾ ಬ್ಯಾಂಕ್‌ನ ಶಾಖೆಯಾಗಿ ಸಿಂಡಿಕೇಟ್ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. ಇನ್ನು ಯೂನಿಯನ್ ಬ್ಯಾಂಕ್ ಜತೆ ಕಾರ್ಪೊರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ವಿಲೀನವಾಗಲಿದೆ.
ವಿಲೀನದ ನಂತರದ ಬ್ಯಾಂಕ್‌ಗಳು
ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್.
ಸ್ವತಂತ್ರ ಬ್ಯಾಂಕ್‌ಗಳು
ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸ್ವತಂತ್ರ ಬ್ಯಾಂಕ್‌ಗಳಾಗಿಯೇ ಉಳಿದಿವೆ.
ಸಾರ್ವಜನಿಕ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಜಾಗತಿಕ ಮಟ್ಟದ ಬೃಹತ್ ಬ್ಯಾಂಕ್‌ಗಳ ರಚನೆ. ಹೆಚ್ಚು ಬ್ಯಾಂಕ್‌ಗಳಿದ್ದರೆ ನಿರ್ವಹಣೆ ಕ್ಲಿಷ್ಟಕರ. ಬ್ಯಾಂಕಿಂಗ್ ವೆಚ್ಚ ನಿಯಂತ್ರಣಕ್ಕೆ ಸಹಕಾರಿ. ವಿಲೀನಗೊಳ್ಳಲಿರುವ ಬ್ಯಾಂಕ್‌ನ ಗ್ರಾಹಕರು ವಿಲೀನ ಮಾಡಿಕೊಳ್ಳುವ ಬ್ಯಾಂಕ್‌ನ ಗ್ರಾಹಕರೆನಿಸಲಿದ್ದಾರೆ.
ನಷ್ಟದಲ್ಲಿದ ಬ್ಯಾಂಕ್ ಆಫ್ ಬರೋಡಾ
ಲಾಭದಲ್ಲಿದ್ದ ವಿಜಯಾ ಬ್ಯಾಂಕ್, ನಷ್ಟದಲ್ಲಿದ ಬ್ಯಾಂಕ್ ಆಫ್ ಬರೋಡಾ ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ವಿಲೀನಗೊಂಡಿತ್ತು. ಇದಾದ ನಂತರ, ವಿಜಯಾ ಬ್ಯಾಂಕ್, ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡ ಜೊತೆ ಮರ್ಜ್ ಆಗಿತ್ತು.
ಲಾಭದಲ್ಲಿದ್ದ ವಿಜಯಾ ಬ್ಯಾಂಕ್, ನಷ್ಟದಲ್ಲಿದ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಂಡಿದ್ದು ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಈಗ, ಮಂಗಳೂರಿನಲ್ಲಿ ಹೆಡ್ ಕ್ವಾಟ್ರಸ್ ಹೊಂದಿರುವ ಕಾರ್ಪೋರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಅಧಿಕೃತವಾಗಿ ಇಂದು (ಏ. 1) ವಿಲೀನಗೊಂಡಿದೆ. ಆಂಧ್ರ ಬ್ಯಾಂಕ್ ಕೂಡಾ ಯುಬಿಐ ಜೊತೆ ವಿಲೀನಗೊಂಡಿದೆ. ಇದು ಹೈದರಾಬಾದ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.
ಭಾರತದ ಹಳೆಯ ಬ್ಯಾಂಕ್ ಗಳಲ್ಲಿ ಒಂದಾದ ಕಾರ್ಪೋರೇಷನ್ ಬ್ಯಾಂಕ್ 12.03.1906ರಂದು ಉಡುಪಿಯಲ್ಲಿ, ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ನೇತೃತ್ವದಲ್ಲಿ ಆರಂಭಗೊಂಡಿತ್ತು. ತದನಂತರ ಬ್ಯಾಂಕ್‌ನ ಕೇಂದ್ರ ಕಚೇರಿ ಮಂಗಳೂರಿಗೆ ಶಿಫ್ಟ್ ಆಯಿತು. ಸಾರ್ವಜನಿಕ ವಲಯದಲ್ಲಿ ಎರಡನೇ ಅತಿದೊಡ್ಡ ಎಟಿಎಂ ಹೊಂದಿರುವ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬ್ಯಾಂಕ್, ಸುಮಾರು 2,200 ಶಾಖೆಯನ್ನು ಹೊಂದಿದೆ. ಇನ್ನು ಈ ಬ್ಯಾಂಕ್ ನೆನಪು ಮಾತ್ರ.
ಕರ್ನಾಟಕ ಮೂಲದ ಒಂದೇ ಬ್ಯಾಂಕ್
ಏಪ್ರಿಲ್ ಒಂದರಿಂದ ಕರ್ನಾಟಕ ಮೂಲದ ಇನ್ನೊಂದು ಬ್ಯಾಂಕ್ ಉಡುಪಿಯಲ್ಲಿ (ಮಣಿಪಾಲ) ಪ್ರಧಾನ ಕಚೇರಿ ಹೊಂದಿರುವ ಸಿಂಡಿಕೇಟ್ ಬ್ಯಾಂಕ್ ಕೂಡಾ ವಿಲೀನಗೊಳ್ಳುತ್ತಿದೆ. ಈ ಬ್ಯಾಂಕ್, ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕೆನರಾ ಬ್ಯಾಂಕ್ ಜೊತೆ ಮರ್ಜ್ ಗೊಳ್ಳಲಿದೆ. ಅಲ್ಲಿಗೆ, ಕರ್ನಾಟಕ ಮೂಲದ ಬ್ಯಾಂಕ್ ಎಂದು ಹೇಳಿಕೊಳ್ಳಲು ಇರುವುದು ಕೆನರಾ ಬ್ಯಾಂಕ್ ಒಂದೇ.
ಇತಿಹಾಸ ಪುಟ ಸೇರಿದ ರಾಜ್ಯದ ಬ್ಯಾಂಕ್‌ಗಳು
ಬ್ಯಾಂಕ್‌ಗಳ ವಿಲೀನದ ಪರಿಣಾಮ ಕರ್ನಾಟಕದ ಕರಾವಳಿ ಮೂಲದ ಬ್ಯಾಂಕ್‌ಗಳು ಇತಿಹಾಸದ ಪುಟ ಸೇರುತ್ತಿವೆ. ಸಾರ್ವಜನಿಕ ಬ್ಯಾಂಕ್‌ಗಳ ಪೈಕಿ ಕೆನರಾ ಬ್ಯಾಂಕ್ ಮಾತ್ರ ಉಳಿದುಕೊಳ್ಳಲಿದೆ. ಎಸ್‌ಬಿಎಂ, ವಿಜಯಾ ಬ್ಯಾಂಕ್, ಇದೀಗ ಕಾರ್ಪೊರೇಷನ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ವಿಲೀನವಾಗುತ್ತಿವೆ.