ಬೆಂಗಳೂರು: ಕರ್ನಾಟಕದಲ್ಲಿ ವಿಶ್ವಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 518ಕ್ಕೆ ಏರಿಕೆಯಾಗಿದ್ದು, ಇಂದು ಸಂಜೆವೇಳೆಗೆ ಕಲಬುರಗಿ ಜಿಲ್ಲೆಯಲ್ಲಿ ಮತ್ತೆ 6 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಮೂಲಕ ಸಂಜೆವೇಳೆಗೆ 15 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಆರು ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾದಬಗ್ಗೆ ಕಲಬುರಗಿ ಜಿಲ್ಲಾಡಳಿತ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಅಂತೆಯೇ ಸೋಮವಾರ ಜಿಲ್ಲೆಯ ಆಳಂದ ನಿವಾಸಿ 54 ವರ್ಷದ ವ್ಯಕ್ತಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.
ಸೋಮವಾರ ಮೃತ ವ್ಯಕ್ತಿಗೆ ಏಪ್ರಿಲ್ 21ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಉಸಿರಾಟದ ತೊಂದರೆಯಿಂದ ಜಿಮ್ಸ್ ಗೆ ದಾಖಲಾಗಿದ್ದು, ತೀವ್ರ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆದರೆ ಸೋಂಕಿತರ ವಿವರವನ್ನು ಈ ವರೆಗೂ ಜಿಲ್ಲಾಡಳಿತ ಪ್ರಕಟಿಸಿಲ್ಲ. ಆರು ಹೊಸ ಪ್ರಕರಣಗಳ ಮೂಲಕ ಕಲಬುರಗಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.
ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ 8 ಜನಕ್ಕೆ ಮತ್ತು ಸಂಜೆ ಬುಲೆಟಿನ್ ನಲ್ಲಿ ಒಬ್ಬರಿಗೆ ಕೊರೋನಾ ಸೋಂಕು ತಗುಲಿರುವುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿತ್ತು.
ಸದ್ಯ ಕಲಬುರಗಿಯಲ್ಲಿ ಹೊಸ 6 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಒಟ್ಟು 15 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 518ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.