ಬೆಂಗಳೂರು: ಕರ್ನಾಟಕದಲ್ಲಿ ಇಂದು ಮಧ್ಯಾಹ್ನದವರೆಗೆ 8 ಹೊಸ ಕೊರೊನಾ ಸೋಂಕಿತರ ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 520ಕ್ಕೆ ಏರಿದೆ. ಇದುವರೆಗೆ ಒಟ್ಟು 198 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 20 ಮಂದಿ ಮೃತಪಟ್ಟಿದ್ದಾರೆ.
ಇಂದು ಒಂದೇದಿನ ಮತ್ತೆ ಕಲಬುರಗಿ ಜಿಲ್ಲೆ ಹೊಸ ಆರು ಪ್ರಕರಣಗಳು ಕಂಡುಬಂದಿದ್ದು, ಉಳಿದಂತೆ ಬೆಂಗಳೂರು ಮತ್ತು ಗದಗದಲ್ಲಿ ತಲಾ ಒಂದು ಪ್ರಕರಣ ಕಂಡು ಬಂದಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನಿಯವಾಗಿ ಏರಿಕೆ ಆಗುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಲಬುರಗಿಯಲ್ಲಿ ಆರರಲ್ಲಿ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಇದ್ದಾರೆ. ಇನ್ನು ಬೆಂಗಳೂರು ಮತ್ತು ಗದಗದಲ್ಲಿ ಒಬ್ಬೊಬ್ಬ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ 29,451 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 29,451 , ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 939 ಮಂದಿ ಮೃತಪಟ್ಟಿದ್ದಾರೆ. 6,868 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 30,66,417 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 2,11,663 ಜನರು ಮೃತಪಟ್ಟಿದ್ದಾರೆ. 9,22,448, ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.