ಬೆಂಗಳೂರು: ದಾವಣಗೆರೆ ಜಿಲ್ಲೆಯಲ್ಲಿ ಈ ದಿನದವರೆಗೆ ಎರಡು ಕೊರೊನಾ ವೈರಸ್ ಸೋಂಕು ಖಚಿತಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಇಂದಿನ ವರೆಗೆ 64 ಸೋಂಕು ಪ್ರಕರಣಗಳೆಂದು ದೃಢಪಡಿಸಲಾಗಿದ್ದು ಮೂವರು ಮೃತಪಟ್ಟಿದ್ದಾರೆ.
ಕೊರೊನಾ ವೈರಸ್‌ಗೆ ಮೊದಲು ಕಲಬುರಗಿಯಲ್ಲಿ ವೃದ್ಧ ಮೃತಪಟ್ಟಿದ್ದು, ಮೊನ್ನೆ ಗೌರಿಬಿದನೂರಿನಲ್ಲಿ ವೃದ್ಧೆ ಸಾವನ್ನಪ್ಪಿದ್ದರು ಇಂದು (ಮಾ.27) ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ ಮೂರಕ್ಕೆ ಏರಿದೆ. ಅದರಂತೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 64ಕ್ಕೆ ಏರಿಕೆ ಆಗಿದೆ. ದೇಶದಲ್ಲಿ 730 ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು 18 ಮಂದಿ ಮೃತಪಟ್ಟಿದ್ದಾರೆ.
ದಾವಣಗೆರೆ ಜಿಲ್ಲಾ ಪ್ರಕರಣ
ವಿದೇಶ ಪ್ರಯಾಣ ಮಾಡಿ ಬಂದಿದ್ದು, ಒಬ್ಬರು 28 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಹಾಗೂ 179 ಜನರು 14 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 154 ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದು, 25 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇದುವರೆಗೂ 23 ಜನರು ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹೊರದೇಶಗಳಲ್ಲಿ ಶಾಶ್ವತವಾಗಿ ನೆಲೆಸಿರುವ ವಿದೇಶಿಗರು ಜಿಲ್ಲೆಗೆ ಬಂದು ಮತ್ತೆ ಹೊರದೇಶಗಳಿಗೆ ಇದುವರೆಗೆ 09 ಜನರು ತೆರಳಿದ್ದಾರೆ. ವಿದೇಶಗಳಿಗೆ ಭೇಟಿ ನೀಡಿ ನಮ್ಮ ಜಿಲ್ಲೆಗೆ ಬಂದು ಇತರೆ ಜಿಲ್ಲೆಗಳಿಗೆ ಇದುವರೆಗೆ 15 ಜನ ತೆರಳಿರುತ್ತಾರೆ. ಕೊರೋನಾ ವೈರಸ್ ಪರೀಕ್ಷೆಗಾಗಿ 32 ಮಾದರಿಗಳನ್ನು ಇದುವರೆಗೆ ಕಳುಹಿಸಲಾಗಿದ್ದು, 27 ಮಾದರಿಗಳು ನೆಗೆಟಿವ್ ಎಂದು ಫಲಿತಾಂಶ ಬಂದಿದೆ. ಇದುವರೆಗೂ ಜಿಲ್ಲೆಯಲ್ಲಿ ಎರಡು ಖಚಿತಪಟ್ಟ ಪ್ರಕರಣಗಳು ವರದಿಯಾಗಿವೆ.
ಸಾರ್ವಜನಿಕರಿಗೆ ಮನವಿ
ಕೊವಿಡ್-19 ಪೀಡಿತ ಪ್ರದೇಶಗಳಿಂದ ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರೂ ಭಾರತಕ್ಕೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ, ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರುವುದು. ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು. ಅಥವಾ 104 ಸಹಾಯವಾಣಿಗೆ ಕರೆ ಮಾಡುವುದು. ವೈಯುಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ಟಿಶ್ಯೂ ಪೇಪರನ್ನು ಬಳಸಿ, ಕೈ ಸಚ್ಚಗೊಳಿಸುವ ದ್ರಾವಣ ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬಾರದು.
ಎಲ್ಲಾ ರೀತಿಯ ಮಾರ್ಗಸೂಚಿಗಳು ಮತ್ತು ಸಲಹೆಗಳು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಜಾಲತಾಣದಲ್ಲಿ ಲಭ್ಯವಿದ್ದು, ಅಲ್ಲಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.