ಬಳ್ಳಾರಿ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ,ಪೆ ಪೊಲೀಸ್ , ಪೌರಾಡಳಿತ ಸಿಬ್ಬಂದಿ, ಮಾಧ್ಯಮಗಳು ಸಲ್ಲಿಸುತ್ತಿರುವ ಸೇವೆ ಅಮೂಲ್ಯವಾಗಿದೆ ಎಂದು ಹಿರಿಯ ನಾಗರಿಕರು ಹಾಗೂ ನಿವೃತ್ತ ಮುಖ್ಯಗುರುಗಳಾದ ಚಾ.ಮ.ಗಂಗಾಧರಯ್ಯ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿದರು.
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಅತ್ಯವಶ್ಯಕ ಇಲಾಖೆಗಳು ಹಾಗೂ ಮಾಧ್ಯಮಗಳು ಸಲ್ಲಿಸುತ್ತಿರುವ ಸೇವೆ ಅತ್ಯಂತ ಶ್ಲಾಘನೀಯವಾದುದು ಎಂದು ಹೇಳಿದ ಅವರು ಎಲ್ಲರೂ ಒಗ್ಗಟ್ಟಿನಿಂದ ಹಗಲಿರುಳು ಎನ್ನದೇ ಜನಸೇವೆಯೇ ಜನಾರ್ಧನ ಸೇವೆ, ಸೇವೆಗಾಗಿ ಬಾಳು ಎನ್ನುವಂತೆ ಹೋರಾಟ ಮಾಡುತ್ತಿದ್ದು, ಅವರಿಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಶಕ್ತಿ ಭಗವಂತ ನೀಡಲಿ ಮತ್ತು ಕರೋನಾ ದೇಶದಿಂದ ತೊಲಗಲಿ ಎಂದು ಆಶಿಸಿದರು.
ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಾರ್ತಾ ಇಲಾಖೆ ಹಾಗೂ ಮಾಧ್ಯಮಗಳು ವಹಿಸುತ್ತಿರುವ ಪಾತ್ರ ಪ್ರಮುಖವಾಗಿದೆ ಎಂದರು. ಹಿರಿಯ ನಾಗರಿಕರಾದ ಎಚ್.ಎಂ.ನಾಗಭೂಷಣಯ್ಯ,ಗೋಟೂರು ಸಿದ್ದಯ್ಯಸ್ವಾಮಿ, ಸಿಂಧುವಾಳ ಮಹೇಶಗೌಡ, ಎಸ್.ಕೊಟ್ರೇಶ್ ಸೇರಿದಂತೆ ಅನೇಕ ಹಿರಿಯ ನಾಗರಿಕರು ಇದ್ದರು.