ಮೈಸೂರು: ಕೊರೊನಾ ಸೋಂಕಿತರಿಂದ ತತ್ತರಿಸಿ ಹೋಗಿದ್ದ ಅರಮನೆಗಳ ನಗರಿ ಸದ್ಯ ವಾರದಿಂದ ನಿರಾಳವಾಗಿದ್ದು ಈ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಕೆಂಪು ವಲಯದಿಂದ ಕಿತ್ತಳೆ ವಲಯದತ್ತ ಮುಖ ಮಾಡುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿವೆ.
ನಂಜನಗೂಡು ತಾಲೂಕು ಜ್ಯುಬಿಲಿಯಂಟ್ ಕಾರ್ಖಾನೆ ಮತ್ತು ತಬ್ಲಿಘಿ ಜಮಾತ್ ಪ್ರಕರಣಗಳಿಂದ ಆರಂಭದಲ್ಲಿ ಕೊರೊನಾ ಹಾಟ್‌ಸ್ಪಾಟ್ ಆಗಿದ್ದ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೇವಲ 2 ಪ್ರಕರಣಗಳು ಮಾತ್ರ ವರದಿಯಾಗಿವೆ. ಈ ವರೆಗೆ 90 ಮಂದಿ ಸೋಂಕಿತರಲ್ಲಿ 79 ಮಂದಿ ಗುಣಮುಖರಾಗಿದ್ದು, 11 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಖ್ಯವಾಗಿ ಕೊರೊನಾ ಸೋಂಕಿನೊಂದಿಗೆ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 72 ವರ್ಷದ ವ್ಯಕ್ತಿ ಗುಣಮುಖರಾಗಿರುವುದು, ಜಿಲ್ಲೆಯಲ್ಲಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ವೃದ್ಧಿಸಿದೆ. ಇದು ಯಾವುದೇ ಪ್ರಾಣಾಪಾಯವಿಲ್ಲದೆ ಸೋಂಕಿತರೆಲ್ಲರೂ ಗುಣಮುಖರಾಗುತ್ತಿದ್ದಾರೆ. ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಉಳಿದ ಸಕ್ರಿಯ ಸೋಂಕಿತರು ವೈರಸ್‌ನಿಂದ ಮುಕ್ತಿಗೊಂಡು ಹೊರಬರಲಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೇವಲ 93 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 4,762 ಜನರ ಮೇಲೆ ನಿಗಾ ವಹಿಸಲಾಗಿದ್ದು ಅದರಲ್ಲಿ 4,658 ಮಂದಿ 14 ದಿನಗಳ ಐಸೊಲೇಷನ್ ಮುಗಿಸಿದ್ದಾರೆ. ಇವರಲ್ಲಿ 3,623 ಮಂದಿಗೆ ಮಾದರಿ ಪರೀಕ್ಷೆ ನಡೆಸಲಾಗಿದೆ. ಇನ್ನು 93 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದು ಅವರಿಗೆ ಮಾದರಿ ಪರೀಕ್ಷೆ ನಡೆಸಬೇಕಾಗಿದೆ.
ನಂಜಿನಿಂದ ಮುಕ್ತಗೊಳ್ಳುತ್ತಿದೆ ನಂಜನಗೂಡು
ಇನ್ನು ನಂಜನಗೂಡಿನಲ್ಲಿ ಸಂಭವಿಸಿದ್ದ ಕೊರೊನಾ ಸ್ಫೋಟಕ್ಕೆ ನಲುಗಿದ್ದ ಜನರು ಸದ್ಯ ನಿಟ್ಟುಸಿರು ಬಿಟ್ಟಿದ್ದು, ಜ್ಯುಬಿಲಿಯಂಟ್ ಕಾರ್ಖಾನೆಯ ಸೋಂಕಿನಿಂದ ಸಾವಿರಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ಗೆ ಒಳಗಾಗಿದ್ದವರು, ಎಲ್ಲರೂ 14 ದಿನಗಳ ಅವಧಿ ಮುಗಿಸಿದ್ದು, ಸೋಂಕಿನ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಎಲ್ಲರೂ ನಿರಾಳರಾಗಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಪಟ್ಟಣದ ಕೆಲವು ಬಡಾವಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಸದ್ಯ ಮೈಸೂರು ಜಿಲ್ಲೆಯಲ್ಲಿ ವಾರದಿಂದೀಚೆಗೆ ಸೋಂಕಿತರ ಪ್ರಕರಣದಲ್ಲಿ ಇಳಿಮುಖಕಂಡುಬರುತ್ತಿದ್ದು ಜಿಲ್ಲಾಡಳಿತ ಸೇರಿದಂತೆ ಎಲ್ಲರೂ ನಿರಾಳರಾಗಿದ್ದಾರೆ.