ಮೈಸೂರು: ಸಾರ್ವಜನಿಕರಿಗೆ ಅಗತ್ಯವಿರುವ ಸೇವೆಗಳಿಗೆ ಪಾಸ್ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕೊರೊನಾ ವೈರೆಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೆಸ್ ಬುಕ್ ಪೇಜ್ ನಲ್ಲಿ ಲೈವ್ ಸಂದೇಶ ನೀಡಿದ ಅವರು, ಸರ್ಕಾರಿ ಅಧಿಕಾರಿಗಳಿಗೆ, ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಇನ್ನಿತರ ಅಗತ್ಯ ಸೇವೆಗಳನ್ನು ಒದಗಿಸುವ ಅಧಿಕಾರಿಗಳಿಗೆ ಪಾಸ್ ಅವಶ್ಯಕತೆಯಿಲ್ಲ ಎಂದರು.
ದಿನನಿತ್ಯ ಅಗತ್ಯ ವಸ್ತುಗಳನ್ನು ಸಾಗಿಸುವ ಸರಕು ವಾಹನಗಳಿನ್ನು ನಿರ್ಬಂಧಿಸಿಲ್ಲ. ಈ ಬಗ್ಗೆ ಜಿಲ್ಲೆಯ ಪೊಲೀಸ್ ಆಯುಕ್ತರ ಜೊತೆ ಮಾತನಾಡಿ, ರೈತರಿಗೆ ತೊಂದರೆ ಆಗದಂತೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಅಂತರ್ಜಾಲದ ಬಳಕೆಯನ್ನು ನಿಷೇಧಿಸಲಾಗುವುದು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಯಾವುದೇ ಕಾರಣಕ್ಕೂ ಅಂತರ್ಜಾಲವನ್ನು ನಿಷೇಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಗರ ಪ್ರದೇಶದ ಜೊತೆಗೆ ಗ್ರಾಮಾಂತರ ಪ್ರದೇಶದ ಜನತೆ ಬಗ್ಗೆಯೂ ಸಹ ಮುಂಜಾಗ್ರತೆ ಕ್ರಮವನ್ನು ಕೈಗೊಂಡಿದ್ದು, ಆಯಾ ಸ್ಥಳಿಯ ಅಧಿಕಾರಿ ಜವಾಬ್ದಾರಿ ವಹಿಸಲಾಗಿದೆ. ಅವರು ಜಿಲ್ಲಾಡಳಿತ ನಿರ್ದೇಶನದಂತೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆ ವರೆಗೆ 1,432 ಜನರ ನಿಗಾ ವಹಿಸಲಾಗಿದೆ. ಈ ಪೈಕಿ 935 ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ. ಈವರೆಗೆ 494 ಮಂದಿ 14 ದಿನಗಳ ಹೋಮ್ ಐಸೋಲೇಶನ್ ಅನ್ನು ಮುಕ್ತಾಯಗೊಳಿಸಿದ್ದಾರೆ.
ಒಟ್ಟು 66 ಜನರನ್ನು ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ 63 ಮಂದಿಗೆ ಯಾವುದೇ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ. 1 ರಿಜೆಕ್ಟ್ ಆಗಿದೆ. ಅದರಲ್ಲಿ 3 ಮಂದಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ 2 ಸಾವಿರಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರಾಗಿ ಆಯ್ಕೆಯಾಗಿದ್ದಾರೆ. ಹೊಸ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಟಿ.ವಿ.ಎಸ್. ಕಂಪನಿಯವರು ಆಹಾರವನ್ನು ಒದಗಿಸಲು ಮುಂದಾಗಿದ್ದಾರೆ ಎಂದರು.
ನಗರದ ಹೋಟೆಲ್, ಸೂಪರ್ ಮಾರ್ಕೆಟ್ ನಿಂದ ಹೋಂ ಡೆಲವರಿ ಮಾಡಲು ಹೆಚ್ಚಿನ ಡೆಲವರಿ ಬಾಯ್ಸ್ ಗಳನ್ನು ನೇಮಕ ಮಾಡಲು ಸೂಚಿಸಲಾಗಿದೆ. ಅಲ್ಲದೆ ಹೋಂ ಡಿಲೆವರಿ ಮಾಡಲು ಕೆಲವು ಕಂಪೆನಿಗಳು ಮುಂದೆ ಬಂದಿವೆ ಎಂದರು.
ನಗರದ ಎಲ್ಲಾ ಹಾಸ್ಟೆಲ್ ಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ಕ್ವಾರಂಟೈನ್ ಸೆಂಟರ್ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಇದನ್ನು ಕೇವಲ ಮುಂಜಾಗ್ರತವಾಗಿ ಚಿಂತಿಸಲಾಗಿದೆ ಹೊರತು ಕಡ್ಡಾಯವಾಗಿ ವಶಕ್ಕೆ ಪಡೆಯುವುದಾಗಿ ಹೇಳಿಲ್ಲ. ಅಗತ್ಯ ಇದ್ದರೆ ಮಾತ್ರ ಈ ಕ್ರಮವಹಿಸಲಾಗುವುದು. ಆದ್ದರಿಂದ ಯಾರೂ ಈ ಬಗ್ಗೆ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.
ಜಿಲ್ಲೆಯ ವಿಶೇಷ ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ಮಾ.28ರ ಬೆಳಗ್ಗೆ 11 ಗಂಟೆಗೆ ಶ್ರವಣ ಮತ್ತು ವಾಕ್ ಸಂಸ್ಥೆಯ ನಿರ್ದೇಶಕಿ ಡಾ.ಪುಷ್ಪ ಅವರಿಂದ ಜನತೆಗೆ ಮತ್ತು ವಿಶೇಷ ಮಕ್ಕಳಿಗೆ ಮಾನಸಿಕವಾಗಿ ಧೈರ್ಯ ತುಂಬಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೆಸ್ ಬುಕ್ ಪೇಜ್ ಲೈವ್ ನಲ್ಲಿ ಮಾತನಾಡಲಿದ್ದಾರೆ ಎಂದರು.
ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರು ಮಾತನಾಡಿ, ಮಾ.28ರಿಂದ ನಗರದಲ್ಲಿರುವ 65 ವಾರ್ಡ್ ಗಳ ಪ್ರತೀ ರಸ್ತೆಗಳಿಗೂ ಜನಸ್ನೇಹಿ ಹೈಡ್ರೋಜನ್ ಸಿಂಪಡಿಸಲಾಗುತ್ತದೆ. ಈಗಾಗಲೇ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ಅಗತ್ಯವಿರುವ ಸೇಪ್ಟಿ ಕಿಟ್ಟ್ ಗಳನ್ನು ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಆದೇಶದಂತೆ ಎಂ.ಜಿ ರಸ್ತೆಯಲ್ಲಿರುವ ಮಾರುಕಟ್ಟೆಯನ್ನು ವಸ್ತು ಪ್ರದರ್ಶನ ಆವರಣಕ್ಕೆ ಸ್ಥಳಾಂತರಿಸಿದ್ದು, ಇದಕ್ಕೆ ವ್ಯಾಪಾರಿಗಳು, ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವ ಮೂಲಕ ಸಹಕರಿಸಿಬೇಕು ಎಂದು ಮನವಿ ಮಾಡಿದರು.
ನಗರದಲ್ಲಿರುವ ನಿರ್ಗತಿಕರ ರಕ್ಷಣೆಗೆ ನೀಡುವ ಸಲುವಾಗಿ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಉದ್ಯೋಗವಿಲ್ಲದೆ ಹಣಕಾಸಿನ ತೊಂದರೆ ಉಂಟಾಗಿರುವ ಜನರಿಗೆ ನಗರ ಪಾಲಿಕೆ ವತಿಯಿಂದ 17 ಕಡೆ ಸಾಂತ್ವನ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.
ನಗರದೆಲ್ಲಡೆ ತಳ್ಳುವ ಗಾಡಿಯವರಿಗೆ ತರಕಾರಿ ಮಾರಲು ಪಾಸ್ ವಿತರಿಸಲಾಗಿದೆ. ನಗರದಲ್ಲಿರುವ ಎಲ್ಲಾ ಸೂಪರ್ ಮಾರ್ಕೆಟ್ ನಿಂದ ಅಗತ್ಯವಿರುವ ವಸ್ತುಗಳನ್ನು ಹೋಂ ಡೆಲವರಿ ಮಾಡಲು ನಗರ ಪಾಲಿಕೆ ಸೂಚಿಸಲಾಗಿದೆ ಎಂದು ತಿಳಿಸಿದರು.