ಚಿತ್ರದುರ್ಗ: ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರದ ನಿರ್ದೇಶನದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಾ. 31 ರವರೆಗೆ ಲಾಕ್ಡೌನ್ ಘೋಷಿಸಲಾಗಿದೆ.
ಹಾಲು, ಆಹಾರ ದಿನಸಿ, ಪೆಟ್ರೋಲ್, ಔಷಧಿ ಅಂಗಡಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳಿಗೆ ನಿರ್ಬಂಧ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಅಂಗಡಿಗಳಿಗೆ ಮುಗಿಬಿದ್ದು, ಸಾಮಗ್ರಿ ಖರೀದಿಸಲು ಮುಂದಾಗಬೇಡಿ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಗೆ ಲಾಕ್ಡೌನ್ ಜಾರಿ ಕುರಿತು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಇರುವ ಒಂದೇ ಒಂದು ಮಾರ್ಗವೆಂದರೆ ಅದು ಸಾರ್ವಜನಿಕರು ಹೊರಗೆ ಬರದೆ ಮನೆಯಲ್ಲಿಯೇ ಉಳಿದುಕೊಳ್ಳುವುದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಇದಕ್ಕಾಗಿಯೇ ಸರ್ಕಾರ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಲಾಕ್ಡೌನ್ ಘೋಷಿಸಿದ್ದು, ಕರ್ಫ್ಯೂ ಆದೇಶವಿದೆ. ಹೀಗಾಗಿ ಸಾರ್ವಜನಿಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದು ರಸ್ತೆಯಲ್ಲಿ ಓಡಾಡಬಾರದು.
ಹಾಲು, ಆಹಾರ ದಿನಸಿ, ಔಷಧಿ ಅಂಗಡಿ, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳಿಗೆ ನಿರ್ಬಂಧ ಇರುವುದಿಲ್ಲ. ಅಥವಾ ಇಂತಹ ವಸ್ತುಗಳ ಸಾಗಾಣಿಕೆ ವಾಹನಗಳಿಗೂ ನಿರ್ಬಂಧದಿಂದ ವಿನಾಯಿತಿ ಇದೆ. ಇಂತಹ ಅಂಗಡಿಗಳು ದಿನದ 24 ಗಂಟೆಯೂ ತೆರೆದಿರಬೇಕು ಎಂದು ಆದೇಶ ನೀಡಲಾಗಿದೆ.
ತರಕಾರಿ ತಳ್ಳುಗಾಡಿಗಳಿಗೆ ಅವಕಾಶ
ಸಾರ್ವಜನಿಕರಿಗೆ ನಿತ್ಯೋಪಯೋಗಿ ತರಕಾರಿಗಳನ್ನು ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡುವವರು ನಗರದ ಬೀದಿಗಳಿಗೆ ತೆರಳಿ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಇಂತಹವರು ಒಂದೇ ಕಡೆ ನಿಂತು ಗುಂಪು ಗುಂಪಾಗಿ ಜನರನ್ನು ಸೇರಿಸಿಕೊಂಡು ತರಕಾರಿ ಮಾರಾಟ ಮಾಡುವಂತಿಲ್ಲ. ಹಾಗೂ ಒಂದೇ ಕಡೆ ಇರುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಸಾಮಾಜಿಕ ಅಂತರ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆದೇಶ ಜಾರಿಗೊಳಿಸಿದ್ದು, ಈ ಆದೇಶದ ಪಾಲನೆ ಹಾಗೂ ಅನುಷ್ಠಾನದ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿಗಾ ವಹಿಸಿ, ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಮಸೀದಿ, ಚರ್ಚ್, ದೇವಸ್ಥಾನ ಬಂದ್
ಸಂಪೂರ್ಣ ಲಾಕ್ಡೌನ್ ಆದೇಶ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಎಲ್ಲ ಮಸೀದಿ, ಚರ್ಚ್, ದೇವಸ್ಥಾನ ಸೇರಿದಂತೆ ಎಲ್ಲ ಬಗೆಯ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಭೇಟಿಯನ್ನು ಬಂದ್ ಮಾಡಬೇಕು. ಸಾರ್ವಜನಿಕರು ತಮ್ಮ ಪ್ರಾರ್ಥನೆ, ಪೂಜೆ ಸೇರಿದಂತೆ ಯಾವುದೇ ಧಾರ್ಮಿಕ ಕೈಂಕರ್ಯಗಳನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಮಾಡಿಕೊಳ್ಳಬೇಕು. ಯಾರೂ ಕೂಡ ಮಸೀದಿ, ಮಂದಿರ, ಚರ್ಚ್ಗಳಿಗೆ ಭೇಟಿ ನೀಡುವಂತಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಆದೇಶದ ಪಾಲನೆಯ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.